ನವದೆಹಲಿ:ಭಾರತ ಕಳೆದ 24 ಗಂಟೆಗಳಲ್ಲಿ 81,441 ಹೊಸ ಕೋವಿಡ್ -19 ಪ್ರಕರಣಗಳ ದಾಖಲಿಸಿದೆ. ಮತ್ತೊಂದೆಡೆ, 'ಕೋವಿಡ್ -19 ಲಸಿಕೆಗಳಿಗೆ ನಾವು ಯಾವುದೇ ರಫ್ತು ನಿಷೇಧ ಹೇರಿಲ್ಲ' ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
81,441 ಹೊಸ ಪ್ರಕರಣಗಳ ಸೇರಿ ಒಟ್ಟಾರೆ ಸೋಂಕಿತರ ಸಂಖ್ಯೆ 12,303,131ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 6,00,000 ದಾಟಿ, ಈಗ 614,696ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಪ್ರಮಾಣದಲ್ಲಿ ಭಾರತ ಈಗ 5ನೇ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದೆ. ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 163,428 ಆಗಿದೆ.
ಅತ್ಯಧಿಕ ಸೋಂಕಿತ ರಾಜ್ಯಗಳು:
ಮಹಾರಾಷ್ಟ್ರವು 43,183 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರದ ಒಂದು ದಿನದ ಗರಿಷ್ಠ ಏರಿಕೆಯಾಗಿದೆ. ಮುಂಬೈನಲ್ಲಿ 8,646 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 423,419 ಕ್ಕೆ ತಲುಪಿದೆ.
ಒಟ್ಟು ಪ್ರಕರಣಗಳಿಂದ ಹೆಚ್ಚು ಪೀಡಿತ ಐದು ರಾಜ್ಯಗಳು ಮಹಾರಾಷ್ಟ್ರ (2,856,163), ಕೇರಳ (1,124,584), ಕರ್ನಾಟಕ (997,004), ಆಂಧ್ರಪ್ರದೇಶ (901,989), ಮತ್ತು ತಮಿಳುನಾಡು (886,673) ಸೇರಿವೆ. ಈ ಎಲ್ಲಾ ಬೆಳವಣಿಗಳ ಮಧ್ಯೆಯೂ ಕೇಂದ್ರವು ತನ್ನ ಲಸಿಕೆ ರಫ್ತು ನೀತಿಯಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ ತಿಳಿಸಿದೆ. ಕಳೆದ ವರ್ಷ ಆಯ್ದ ಕೆಲವು ಔಷಧಿಗಳ ರಫ್ತಿಗೆ ನಿರ್ಬಂಧ ಹೇರಿತ್ತು.
ಅಪಾಯದತ್ತ ದೆಹಲಿ:
ದೆಹಲಿಯು 2,790 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು, ಇದು ಈ ವರ್ಷದ ಗರಿಷ್ಠ ದೈನಂದಿನ ಎಣಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಆರೋಗ್ಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ "ತುರ್ತು" ಸಭೆ ನಡೆಸಲಿದ್ದಾರೆ.
ನಾಗರಿಕರಿಗಿಂತ ಪರದೇಶಕ್ಕೆ ಕೊಟ್ಟಿದ್ದು ಹೆಚ್ಚು:
ಭಾರತವು ತನ್ನದೇ ನಾಗರಿಕರಿಗೆ ಲಸಿಕೆ ನೀಡುವುದಕ್ಕಿಂತ ಜಾಗತಿಕವಾಗಿ ಹೆಚ್ಚು ಕೋವಿಡ್-19 ಲಸಿಕೆಗಳನ್ನು ಪೂರೈಸಿದೆ ಎಂದು ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಯುಎನ್ ರಾಯಭಾರಿ ಕೆ. ನಾಗರಾಜ್ ನಾಯ್ಡು ಹೇಳಿದ್ದರು.
ಮುಂದಿನ ಆರು ತಿಂಗಳಲ್ಲಿ ಭಾರತವು ತನ್ನದೇ ಆದ 300 ಮಿಲಿಯನ್ ಕಾರ್ಮಿಕರಿಗೆ ಲಸಿಕೆ ನೀಡಲಿದೆ. ಈ ಪ್ರಕ್ರಿಯೆಯಲ್ಲಿ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಿದೆ. ವಾಸ್ತವವಾಗಿ, ಈ ವೇಳೆಗಾಗಲೇ ನಾವು ನಮ್ಮ ನಾಗರಿಕರಿಗೆ ಲಸಿಕೆ ನೀಡಿದ್ದಕ್ಕಿಂತ ಹೆಚ್ಚಿನ ಲಸಿಕೆಗಳನ್ನು ಜಾಗತಿಕವಾಗಿ ಪೂರೈಸಿದ್ದೇವೆ ಎಂದಿದ್ದರು.
2 ಬಿಲಿಯನ್ ಡೋಸ್ ಲಸಿಕೆ ರಫ್ತು ಗುರಿ:
ಗವಿ-ಕೋವ್ಯಾಕ್ಸ್ ವ್ಯವಸ್ಥೆ ಮೂಲಕ ದೇಶದಲ್ಲಿ ವಿತರಣೆ ಮಾಡಿದ್ದಕ್ಕಿಂತ 3 ಪಟ್ಟು ಹೆಚ್ಚು, ಅಂದರೆ 33 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ವಿದೇಶಗಳಿಗೆ ರಫ್ತು ಮಾಡಿದೆ ಎಂದು ಎಂದು ಹಿರಿಯ ಆರೋಗ್ಯ ತಜ್ಞ ಮತ್ತು ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ ಅಧ್ಯಕ್ಷ ಡಾ. ತಮೋರಿಶ್ ಕೋಲ್ ಈಟಿವಿ ಭಾರತಗೆ ತಿಳಿಸಿದ್ದರು.
ಮೊದಲ ಬಾರಿಗೆ ಫೆಬ್ರವರಿ 2 ರಂದು ಕೋವ್ಯಾಕ್ಸ್ ಕಾರ್ಯಕ್ರಮದಡಿ ಸೆರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದಿಂದ (ಎಸ್‌ಐಐ) ಘಾನಾ ದೇಶವು 6 ಲಕ್ಷ ಡೋಸ್ ಕೋವಿಡ್ ಲಸಿಕೆ ಪಡೆಯಿತು. 2021ರಲ್ಲಿ 2 ಬಿಲಿಯನ್ ಡೋಸ್ ಲಸಿಕೆ ರಫ್ತು ಮಾಡುವ ಗುರಿಯನ್ನು ಭಾರತ ಹೊಂದಿದೆ.