ಹೈದರಾಬಾದ್:ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳೆಲ್ಲವೂ ದಿನನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಅದರಲ್ಲೂ ಇಂಟರ್ನೆಟ್ ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೂ ಕಷ್ಟ! ಆದರೆ ಇಂಟರ್ನೆಟ್ ಮೇಲೆ ನಮ್ಮ ಅವಲಂಬನೆ ಹೆಚ್ಚಾದಷ್ಟೂ ವೈಯಕ್ತಿಕ ಮಾಹಿತಿಗಳ ಸೋರಿಕೆಯ ಭಯ ಹೆಚ್ಚಾಗುತ್ತಿದೆ.
ಶಾಪಿಂಗ್, ಮನರಂಜನೆ, ಹಣಕಾಸು ವ್ಯವಹಾರ, ಡೇಟಾ ಸಂಗ್ರಹಣೆ, ಶಿಕ್ಷಣ ಮತ್ತು ಸಾಮಾಜಿಕ ಸಂಪರ್ಕಕ್ಕೆ ನಾವಿಂದು ಹಲವಾರು ಆ್ಯಪ್ಗಳನ್ನು ಬಳಸುತ್ತಿದ್ದೇವೆ. ಇದರ ಜೊತೆಗೆ ವರ್ಕ್ ಫ್ರಂ ಹೋಂ ಕೂಡ ಹೊಸ ನಾರ್ಮಲ್ ಆಗಿರುವುದರಿಂದ ಇಂಟರ್ನೆಟ್ ಬಳಕೆ ಮತ್ತೂ ಹೆಚ್ಚಾಗಿದೆ. ಹೀಗಾಗಿ ಸೈಬರ್ ದಾಳಿಯ ಸಾಧ್ಯತೆಯೂ ಹೆಚ್ಚಾಗಿದ್ದು, ಸೈಬರ್ ಸುರಕ್ಷತೆಯ ವಿಷಯ ಈಗ ಮುನ್ನೆಲೆಗೆ ಬಂದಿದೆ. ಆದರೆ ಈಗ ಸೈಬರ್ ಸುರಕ್ಷತೆಗಾಗಿ ವಿಮಾ ಸೌಲಭ್ಯ ಬಂದಿರುವುದು ಇಂಟರ್ನೆಟ್ ಬಳಕೆದಾರರಿಗೆ ನೆಮ್ಮದಿಯ ಸಂಗತಿಯಾಗಿದೆ.
ಕೋವಿಡ್-19 ಪರಿಹಾರವಾಗಿ ಸರ್ಕಾರ ಹಣ ನೀಡುತ್ತಿದೆ ಎಂಬ ಸಂದೇಶವನ್ನು ಬಿತ್ತರಿಸಿ ಸುಮಾರು 2 ಮಿಲಿಯನ್ ಭಾರತೀಯ ಇಂಟರ್ನೆಟ್ ಬಳಕೆದಾರರ ಮೇಲೆ ಫಿಶಿಂಗ್ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಜೂನ್ 19 ರಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (Indian Computer Emergency Response Team -CERT-In) ಎಚ್ಚರಿಕೆ ನೀಡಿತ್ತು. ಗಲ್ವಾನ್ ಸಂಘರ್ಷದ ನಂತರ ಚೀನಾದ ಸೈಬರ್ ಖದೀಮರು ಭಾರತದ ಮೇಲೆ ತಮ್ಮ ಸೈಬರ್ ದಾಳಿಯನ್ನು ಶೇ 200 ರಷ್ಟು ಹೆಚ್ಚಿಸಿದ್ದಾರೆ.
ಇಂಥ ಸಮಯದಲ್ಲಿ ತಾವು ಕಷ್ಟಪಟ್ಟು ಗಳಿಸಿದ ಹಣ, ಸಂಪತ್ತು, ಸಾಮಾಜಿಕ ಘನತೆ, ಆರೋಗ್ಯ, ಮಾನಸಿಕ ಆರೋಗ್ಯಗಳನ್ನು ಕಾಪಾಡಿಕೊಳ್ಳುವುದು ಎಲ್ಲರ ಹೊಣೆಯಾಗಿದೆ. ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ವಿಮೆ ನಿಮಗೆ ಸಹಾಯ ಮಾಡಬಲ್ಲದು.
ವೈಯಕ್ತಿಕ ಸೈಬರ್ ಇನ್ಸೂರೆನ್ಸ್ ಪಾಲಿಸಿ ಎಂದರೇನು?
18 ವರ್ಷ ಮೇಲ್ಪಟ್ಟವರು ವೈಯಕ್ತಿಕ ಇನ್ಸೂರೆನ್ಸ್ ಪಾಲಿಸಿ ಪಡೆಯಬಹುದು. ಸೈಬರ್ ದಾಳಿಯಾದಾಗ ನಿಮಗೆ ವೈಯಕ್ತಿಕವಾಗಿ ಆಗುವ ನಷ್ಟಗಳನ್ನು ಸರಿದೂಗಿಸಲು ಸೈಬರ್ ಇನ್ಸೂರೆನ್ಸ್ ಪಾಲಿಸಿ ಸಹಾಯ ಮಾಡುತ್ತದೆ.
ಯಾರಿಗೆಲ್ಲ ಅವಶ್ಯ ಸೈಬರ್ ಇನ್ಸೂರೆನ್ಸ್ ಪಾಲಿಸಿ?
ಯಾವುದೇ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಹಣಕಾಸು ವ್ಯವಹಾರ ನಡೆಸುವವರು, ಪೇಮೆಂಟ್ ಗೇಟ್ವೇ ಬಳಸುವವರು, ಕ್ಲೌಡ್ ಸರ್ವಿಸ್ ಬಳಕೆದಾರರು, ಹೋಂ ಅಸಿಸ್ಟನ್ಸ್ ಬಳಕೆದಾರರು ಅಥವಾ ಅದಕ್ಕೆ ಜೋಡಿಸಿದ ಸಾಧನಗಳನ್ನು ಬಳಸುವವರು ಸೇರಿದಂತೆ ಇನ್ನೂ ಕೆಲ ರೀತಿಯಲ್ಲಿ ಇಂಟರ್ನೆಟ್ ಬಳಸುವವರಿಗೆ ಸೈಬರ್ ಇನ್ಸೂರೆನ್ಸ್ ಪಾಲಿಸಿ ಅಗತ್ಯವಾಗಿದೆ.
ಯಾವೆಲ್ಲ ಕಂಪನಿಗಳು ಸೈಬರ್ ಇನ್ಸೂರೆನ್ಸ್ ಪಾಲಿಸಿ ನೀಡುತ್ತಿವೆ?
ಭಾರತದ ಪ್ರಮುಖ ವಿಮಾ ಕಂಪನಿಗಳಾದ ಎಚ್ಡಿಎಫ್ಸಿ ಎರ್ಗೊ, ಬಜಾಜ್ ಅಲಿಯಾಂಜ್ ಜನರಲ್ ಇನ್ಸೂರೆನ್ಸ್ ಮತ್ತು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಗಳು ವೈಯಕ್ತಿಕ ಸೈಬರ್ ಇನ್ಸೂರೆನ್ಸ್ ಪಾಲಿಸಿ ನೀಡುತ್ತಿವೆ.