ಕರ್ನಾಟಕ

karnataka

ETV Bharat / business

ಫೇಸ್‌ಬುಕ್ ಬಳಿಕ ಜಿಯೋದಲ್ಲಿ 11 ಸಾವಿರ ಕೋಟಿ ಹೂಡಿಕೆಗೆ ನಿರ್ಧರಿಸಿದ ಅಮೆರಿಕದ ವಿಸ್ಟಾ - reliance industries

ಅಮೆರಿಕ ಮೂಲದಕ ವಿಸ್ಟಾ ಈಕ್ವಿಟಿ ಪಾರ್ಟ್​ನರ್ ಜಿಯೋ ಪ್ಲಾಟ್​ಫಾರ್ಮ್​​ನಲ್ಲಿ 11 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್​ ಇಂಡಸ್ಟ್ರೀಸ್​ ಹಾಗೂ ಜಿಯೋ ಪ್ಲಾಟ್​ಫಾರ್ಮ್​ ಲಿಮಿಟೆಡ್​ಗಳು ಘೋಷಣೆ ಮಾಡಿವೆ.

reliance industries
ರಿಲಯನ್ಸ್​​ ಇಂಡಸ್ಟ್ರೀಸ್​​​

By

Published : May 8, 2020, 6:11 PM IST

ಮುಂಬೈ:ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ 11,367 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಇಂದು ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ.

ವಿಸ್ಟಾ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ 2.32% ಈಕ್ವಿಟಿ ಪಾಲುದಾರಿಕೆಗೆ ಸಮನಾಗಿರಲಿದ್ದು, ಈ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರನ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ 60,596.37 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಜಿಯೋದ ಮುಂಚೂಣಿ ಡಿಜಿಟಲ್ ಅಪ್ಲಿಕೇಷನ್​ಗಳು, ಡಿಜಿಟಲ್ ಇಕೋಸಿಸ್ಟಂಗಳು ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ಛಾವಣಿಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ಮುಂದಿನ ಪೀಳಿಗೆಯ ತಂತ್ರಜ್ಞಾನ ಸಂಸ್ಥೆಯಾಗಿದೆ. 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಪ್ಲಾಟ್‌ಫಾರ್ಮ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರಲಿವೆ.

1.3 ಶತಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೋ ತಂದಿದೆ ಹಾಗೂ ವಿಶ್ವದ ಪ್ರಮುಖ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿ ಜಾಗತಿಕ ತಂತ್ರಜ್ಞಾನ ನಾಯಕತ್ವದ ಸ್ಥಾನ ಪಡೆಯುವತ್ತ ಭಾರತವನ್ನು ಮುನ್ನಡೆಸಿದೆ.

ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, ಉದ್ಯಮಗಳನ್ನು ಮರುಶೋಧಿಸುತ್ತಿರುವ ಹಾಗೂ ಬದಲಾವಣೆಯ ವೇಗವರ್ಧಿಸುತ್ತಿರುವ ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳ ಸಬಲೀಕರಣ ಹಾಗೂ ಬೆಳವಣಿಗೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ವಿಸ್ಟಾ 57 ಶತಕೋಟಿ ಡಾಲರುಗಳಿಗಿಂತ ಹೆಚ್ಚಿನ ಸಂಚಿತ ಬಂಡವಾಳ ಬದ್ಧತೆಗಳನ್ನು ಹೊಂದಿದೆ ಮತ್ತು ಅದರ ಜಾಗತಿಕ ಸಂಸ್ಥೆಗಳ ಜಾಲವು ಒಟ್ಟಾರೆಯಾಗಿ ವಿಶ್ವದ 5ನೇ ಅತಿದೊಡ್ಡ ಎಂಟರ್‌ಪ್ರೈಸ್ ತಂತ್ರಾಂಶ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ.

ಎಂಟರ್‌ಪ್ರೈಸ್ ತಂತ್ರಾಂಶವೊಂದರಲ್ಲೇ 20 ವರ್ಷಗಳ ಹೂಡಿಕೆ ಅನುಭವ ಹೊಂದಿರುವ ವಿಸ್ಟಾ, ತಂತ್ರಜ್ಞಾನದ ಪರಿವರ್ತಕ ಶಕ್ತಿಯು ಆರೋಗ್ಯಕರ ಗೃಹ, ಚುರುಕಾದ ಆರ್ಥಿಕತೆ, ವೈವಿಧ್ಯಮಯ ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಮತ್ತು ಸಮೃದ್ಧಿಯತ್ತ ವಿಶಾಲ ಮಾರ್ಗವಿರುವ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಿದೆ ಎಂದು ನಂಬುತ್ತದೆ. ಪ್ರಸ್ತುತ, ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.

ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವ ದೃಷ್ಟಿಯನ್ನು ವಿಸ್ಟಾ ಕೂಡ ನಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಪ್ರತಿಯೊಬ್ಬರಿಗೂ ಇನ್ನೂ ಉತ್ತಮ ಭವಿಷ್ಯದ ಕೀಲಿಯಾಗಬಲ್ಲ ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಅವರು ನಂಬುತ್ತಾರೆ. ಗುಜರಾತ್ ಮೂಲದ ಕುಟುಂಬದಿಂದ ಬಂದಿರುವ ರಾಬರ್ಟ್ ಮತ್ತು ಬ್ರಿಯಾನ್ ಅವರಲ್ಲಿ, ಭಾರತವನ್ನು ಮತ್ತು ಡಿಜಿಟಲ್ ಭಾರತೀಯ ಸಮಾಜದ ಪರಿವರ್ತಕ ಸಾಮರ್ಥ್ಯವನ್ನು ನಂಬುವ ಇಬ್ಬರು ಅತ್ಯುತ್ತಮ ಜಾಗತಿಕ ತಂತ್ರಜ್ಞಾನ ನಾಯಕರನ್ನು ನಾನು ಕಂಡಿದ್ದೇನೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಬಹು-ಹಂತದ ಬೆಂಬಲದ ಪ್ರಯೋಜನವನ್ನು ಜಿಯೋಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ.” ಎಂದು ಹೇಳಿದ್ದಾರೆ.

ಹೂಡಿಕೆಯ ಬಗ್ಗೆ ಮಾತನಾಡಿದ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಓ ರಾಬರ್ಟ್ ಎಫ್. ಸ್ಮಿತ್, "ಭಾರತಕ್ಕಾಗಿ ಜಿಯೋ ನಿರ್ಮಿಸುತ್ತಿರುವ ಡಿಜಿಟಲ್ ಸಮಾಜದ ಸಾಧ್ಯತೆಗಳನ್ನು ನಾವು ನಂಬುತ್ತೇವೆ. ಜಿಯೋದ ವಿಶ್ವ ದರ್ಜೆಯ ನಾಯಕತ್ವದ ತಂಡದೊಂದಿಗೆ ಜಾಗತಿಕ ಪ್ರವರ್ತಕನಾಗಿ ಮುಖೇಶ್ ಅವರ ದೃಷ್ಟಿಕೋನವು, ಜಿಯೋ ಪ್ರಾರಂಭಿಸಿದ ಡೇಟಾ ಕ್ರಾಂತಿಯನ್ನು ಬೆಳೆಸಲು ಮತ್ತು ಮುನ್ನಡೆಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಭಾರತದಾದ್ಯಂತ ಸಂಪರ್ಕದಲ್ಲಿ ತ್ವರಿತ ಬೆಳವಣಿಗೆಯನ್ನು ನೀಡಲು, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗಳಲ್ಲೊಂದರ ಭವಿಷ್ಯವನ್ನು ಉತ್ತೇಜಿಸುವುದಕ್ಕಾಗಿ ಆಧುನಿಕ ಗ್ರಾಹಕ, ಸಣ್ಣ ವ್ಯಾಪಾರ ಮತ್ತು ಉದ್ಯಮಗಳಿಗೆ ತಂತ್ರಾಂಶವನ್ನು ಒದಗಿಸಲು ಜಿಯೋ ಪ್ಲಾಟ್‌ಫಾರ್ಮ್ಸ್ ಜೊತೆ ಸೇರಲು ನಾವು ರೋಮಾಂಚನಗೊಂಡಿದ್ದೇವೆ." ಎಂದು ಹೇಳಿದ್ದಾರೆ.

ABOUT THE AUTHOR

...view details