ನವದೆಹಲಿ: ಶತಮಾನದಷ್ಟು ಇತಿಹಾಸ ಹೊಂದಿರುವ ಭಾರತೀಯ ರೈಲ್ವೆ ಮಂಡಳಿಗೆ ಪ್ರಥಮ ಬಾರಿಗೆ ವಿನೋದ್ ಕುಮಾರ್ ಯಾದವ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ರೈಲ್ವೆಯಲ್ಲಿ ಹಂತ- ಹಂತವಾಗಿ ಖಾಸಗೀರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಬುಧವಾರ ಔಪಚಾರಿಕವಾಗಿ ರೈಲ್ವೆ ಮಂಡಳಿಯನ್ನು ರಚಿಸಿತು. ಯಾದವ್ ಅವರನ್ನು ಹೊಸದಾಗಿ ರಚಿಸಲಾದ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.
ಯಾದವ್ ಅವರನ್ನು 2019ರಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೂ ಮುಂಚಿತವಾಗಿ ಅವರು ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.
ರಾಷ್ಟ್ರೀಯ ಸಾರಿಗೆಯ ಆರಂಭಿಸಿದ ಸುಧಾರಣೆಗಳ ಭಾಗವಾಗಿ 114 ವರ್ಷಗಳ ಹಳೆಯ ರೈಲ್ವೆ ಮಂಡಳಿಯ ಸಾಂಸ್ಥಿಕ ಪುನರ್ ರಚನೆಗೆ ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಮಂಡಳಿಯ ಎಂಟು ಸ್ಥಾನಗಳನ್ನು ಹೊಂದಿದ್ದ ಉನ್ನತ ಹುದ್ದೆಗಳನ್ನು ಐದಕ್ಕೆ ಕಡಿತಗೊಳಿಸಲಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿರುವವರ ಅಧ್ಯಕ್ಷರ ನೇತೃತ್ವದಲ್ಲಿ ರೈಲ್ವೆ ಮಂಡಳಿ ಮುಂದುವರಿಯಲಿದೆ. ಇತರ ನಾಲ್ಕು ಸದಸ್ಯರಾಗಿ ಮೂಲಸೌಕರ್ಯ, ರೋಲಿಂಗ್ ಸ್ಟಾಕ್, ಹಣಕಾಸು ಮತ್ತು ಕಾರ್ಯಾಚರಣೆಗಳು ಮತ್ತು ವ್ಯವಹಾರ ಅಭಿವೃದ್ಧಿ ಇರಲಿವೆ.
ಮೂಲ ಸೌಕರ್ಯ ಸದಸ್ಯರಾಗಿ ಪ್ರದೀಪ್ ಕುಮಾರ್, ರೋಲಿಂಗ್ ಸ್ಟಾಕ್ ಸದಸ್ಯರಾಗಿ ಪಿಸಿ ಶರ್ಮಾ, ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿಗೆ ಪಿಎಸ್ ಮಿಶ್ರಾ ಹಾಗೂ ಮಂಜುಳ ರಂಗರಾಜನ್ ಅವರನ್ನು ಹಣಕಾಸು ಸದಸ್ಯರನ್ನಾಗಿ ನೇಮಿಸಲಾಗಿದೆ.
ಭಾರತೀಯ ಸೇನೆಗೆ ಸಂಬಂಧಿಸಿದಂತೆ ಇಂತಹದ್ದೆ ಅಚ್ಚರಿಯ ನಡೆಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿತ್ತು. ದೇಶದ ಮೂರು ಸೇನಾಪಡೆಗಳ (ಭೂ ಸೇನೆ, ವಾಯುಪಡೆ, ನೌಕಾ ಪಡೆ) ಮೊದಲ ಮುಖ್ಯಸ್ಥರಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು 2019ರ ಡಿಸೆಂಬರ್‌ನಲ್ಲಿ ನೇಮಕ ಮಾಡಿತ್ತು. ಅದೇ ಮೊದಲ ಬಾರಿಗೆ ಆ ಹುದ್ದೆಯನ್ನು ಭಾರತ ಸರ್ಕಾರದಿಂದ ಸೃಷ್ಟಿಸಲಾಗಿತ್ತು. ಈಗ ಅಂತಹದೇ ನಿರ್ಧಾರವನ್ನು ರೈಲ್ವೆ ಮಂಡಳಿಯಲ್ಲೂ ತೆಗೆದುಕೊಂಡಿದೆ.