ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ದೇಶದಲ್ಲಿ ಪ್ರಥಮ ಬಾರಿಗೆ ಜಾರಿಗೆ ತರಲಾದ ಎಸ್‌ಸಿಪಿಟಿಎಸ್‌ಪಿ ಅನುದಾನ ಬಳಕೆಯಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿ ಎದ್ದು ಕಾಣುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಎಂಬ ಕಾಯಿದೆಯೊಂದನ್ನು ಜಾರಿಗೆ ತಂದಿದ್ದರು. ಈ ಯೋಜನೆಯಡಿ ಮೀಸಲಿರಿಸಿದ್ದ ಅನುದಾನ, ಪೂರ್ಣ ಪ್ರಮಾಣದಲ್ಲಿ ಬಳಸಲು ಇಲಾಖೆಗಳಿಗೆ ಸಾಧ್ಯವಾಗುತ್ತಿಲ್ಲ.
ನಿನ್ನೆ (ಗುರುವಾರ) ಬುಡಕಟ್ಟು ಜನಾಂಗ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ಗಿರಿಜನ ಕಲ್ಯಾಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸಹ ಪರ್ಯಾಲೋಚನೆ ನಡೆಸಲಾಯಿತು. ವಾಸ್ತವದಲ್ಲಿ ಎಸ್‌ಸಿಪಿಟಿಎಸ್‌ಪಿ ಯೋಜನಾ ಭಾಗವಾದ 'ಗಿರಿಜನ ಉಪಯೋಜನೆ'ಯ (ಟಿಎಸ್‌ಪಿ), ಅನುದಾನ ಬಳಕೆಯ ಅಂಕಿಅಂಶ ಗಮನಿಸಿದರೇ ಪೂರ್ಣ ಪ್ರಮಾಣದಲ್ಲಿ ಬಳಕೆ ಸಾಧ್ಯವಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಅನುದಾನ ಬಳಕೆಯಲ್ಲಿ ವಿಫಲ
ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಯೋಜನೆಯ ಮೊದಲ ವರ್ಷದಲ್ಲಿ 4,312.33 ಕೋಟಿ ರೂ. ಟಿಎಸ್‌ಪಿ ಅನುದಾನ ಮೀಸಲಿಟ್ಟಿತ್ತು. ಈ ಅನುದಾನ ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎನ್ನುವ ಷರತ್ತು ಕೂಡ ಅದು ವಿಧಿಸಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ಒಂದು ಬಾರಿಯೂ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆಯಾಗಿಲ್ಲ. 2014-15ರಲ್ಲಿ ಕೇವಲ 3,514.36 ಕೋಟಿ ರೂ. ಅಂದರೆ ಶೇ 81.49 ಅನುದಾನ ಬಳಕೆಯಾಗಿದೆ.
ಎಸ್‌ಸಿಪಿಟಿಎಸ್‌ಪಿಗೆ ಬಿಡುಗಡೆಯಾದ ಅನುದಾನ ಮತ್ತು ಬಳಕೆ 2015-16ರಲ್ಲಿ 4,585.95 ಕೋಟಿ ರೂ. ಅನುದಾನದಲ್ಲಿ 4,385.51 ಕೋಟಿ ರೂ. ಬಳಕೆಯಾಗಿದ್ದು (ಶೇ 95.63) ಈವರೆಗಿನ ಗರಿಷ್ಠ ಪ್ರಮಾಣವಾಗಿದೆ. 2016-17ರಲ್ಲಿ 5,632.19 ಕೋಟಿ ರೂ. ಗಿರಿಜನ ಉಪಯೋಜನೆ ಅನುದಾನ ಹಂಚಿಕೆಯಾಗಿತ್ತು. ಈ ಪೈಕಿ 5,150.10 ಕೋಟಿ ರೂ.ಯಷ್ಟು ಬಳಕೆ ಮಾಡಲಾಗಿದೆ. ಶೇ 91.44ರಷ್ಟು ಅನುದಾನ ಸದ್ಬಳಕೆಯಾಗಿದೆ.
2017-18ರಲ್ಲಿ ಟಿಎಸ್ಪಿಯಲ್ಲಿ 8,314.76 ಕೋಟಿ ರೂ. ಅನುದಾನದಲ್ಲಿ 7,696.85 ಕೋಟಿ ರೂ. (ಶೇ 92.57ರಷ್ಟು) ವಿನಿಯೋಗವಾಗಿದೆ. 2018-19ರಲ್ಲಿ ಗಿರಿಜನ ಉಪಯೋಜನೆಯಡಿ 8,587.99 ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ 7,912.19 ಕೋಟಿ ರೂ. ಬಳಕೆ ಮಾಡಲಾಗಿತ್ತು.
2019-20ನೇ ಸಾಲಿನಲ್ಲಿ ಟಿಎಸ್‌ಪಿ ಅನುದಾನ ಎಂದು 8,847.32 ಕೋಟಿ ರೂ. ಮೀಸಲಿರಿಸಲಾಗಿದೆ. ಆದರೆ, ಈ ಅನುದಾನದಲ್ಲಿ ನವೆಂಬರ್ ಅಂತ್ಯಕ್ಕೆ ಕೇವಲ ಶೇ.39ರಷ್ಟು ಮಾತ್ರ ಬಳಕೆಯಾಗಿದೆ. ಉಳಿದ ನಾಲ್ಕು ತಿಂಗಳಲ್ಲಿ ಅನುದಾನ ಬಳಕೆಯಲ್ಲಿ ಗಣನೀಯ ಪ್ರಗತಿ ಕಾಣುವುದು ಕಷ್ಟ ಎಂಬ ಆತಂಕ ಅಧಿಕಾರಿಗಳಲ್ಲೇ ಕಾಡುತ್ತಿದೆ.