ನವದೆಹಲಿ: ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತ ರೈತರ ನಡೆಸುತ್ತಿರುವ ಆಂದೋಲನದಿಂದ ವ್ಯಾಪಾರಿಗಳಿಗೆ 14,000 ಕೋಟಿ ರೂ. ನಷ್ಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಕಳೆದ 26 ದಿನಗಳಲ್ಲಿ ರೈತರ ಪ್ರತಿಭಟನೆಯು ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಡೆಯುತ್ತಿರುವುದರಿಂದ 14,000 ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿತ್ಯ ಸುಮಾರು 50,000 ಟ್ರಕ್ಗಳು ಇತರ ರಾಜ್ಯಗಳಿಂದ ಸರಕುಗಳನ್ನು ತೆಗೆದುಕೊಂಡು ದೆಹಲಿ ಪ್ರವೇಶಿಸುತ್ತವೆ. ಸುಮಾರು 30,000 ಟ್ರಕ್ಗಳು ದೆಹಲಿಯಿಂದ ಹೊರಡುತ್ತವೆ. ಪ್ರತಿಭಟನೆಯಿಂದಾಗಿ ಈ ಟ್ರಕ್‌ಗಳ ಪೈಕಿ ಶೇ 20ರಷ್ಟು ಸಿಕ್ಕಿಹಾಕಿಕೊಂಡಿವೆ ಎಂದು ಹೇಳಿದರು.
ಇದನ್ನೂ ಓದಿ: 5 ಜಿಗಾಗಿ ಒಪ್ಪೋ & ಸ್ಯಾಮ್‌ಸಂಗ್ ಬ್ರಾಂಡ್ಗೆ ಭಾರತೀಯರ ಆದ್ಯತೆ: ಸಮೀಕ್ಷೆ
ಅಗತ್ಯವಾದ ಎಫ್‌ಎಂಸಿಜಿ ಉತ್ಪನ್ನಗಳು, ಗ್ರಾಹಕ ವಸ್ತುಗಳು, ಆಹಾರ ಧಾನ್ಯಗಳು ಇತ್ಯಾದಿಗಳನ್ನು ಈ ಟ್ರಕ್ಗಳು ಸಾಗಿಸುತ್ತಿವೆ. ಸರ್ಕಾರದೊಂದಿಗೆ ಮಾತನಾಡಿ, ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಂತೆ ಖಂಡೇಲ್ವಾಲ್ ರೈತರಿಗೆ ಮನವಿ ಮಾಡಿದರು.
ದೆಹಲಿಯಲ್ಲಿ ಸದ್ಯಕ್ಕೆ ಯಾವುದೇ ಕೊರತೆಗಳು ಇಲ್ಲದಿದ್ದರೂ, ಪ್ರತಿಭಟನೆ ಮುಂದುವರಿದರೆ ಮುಂದಿನ ಹದಿನೈದು ಇಪ್ಪತ್ತು ದಿನಗಳಲ್ಲಿ ಮತ್ತಷ್ಟು ತೊಂದರೆಗಳು ಎದುರಾಗಬಹುದು. ನಾವು ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ. ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದೊಂದಿಗೆ ಮಾತನಾಡಬೇಕು ಎಂದು ನಾವು ಅವರನ್ನು ಒತ್ತಾಯಿಸುತ್ತೇವೆ. ಸುಪ್ರೀಂಕೋರ್ಟ್ ಪೀಠವು ಈ ವಿಷಯವನ್ನು ಆದ್ಯತೆಯ ಮೇರೆಗೆ ತೆಗೆದುಕೊಂಡು ಸಕರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.