ಮುಂಬೈ:ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆ ಟಿಪಿಜಿ, ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 4,546.80 ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಭಾರತದ ಡಿಜಿಟಲ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಇಂದು ಘೋಷಿಸಿವೆ.
ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಎಲ್ ಕ್ಯಾಟರ್‌ಟನ್‌ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ 0.39 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, 2020ರ ಏಪ್ರಿಲ್ 22 ರಿಂದ ಇಲ್ಲಿಯವರೆಗೆ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ಒಟ್ಟು 104,326.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.
1992ರಲ್ಲಿ ಸ್ಥಾಪನೆಯಾದ ಟಿಪಿಜಿ ಪ್ರಮುಖ ಜಾಗತಿಕ ಪರ್ಯಾಯ ಆಸ್ತಿ ಸಂಸ್ಥೆಯಾಗಿದ್ದು, ಪ್ರೈವೇಟ್ ಈಕ್ವಿಟಿ, ಗ್ರೋಥ್ ಈಕ್ವಿಟಿ, ರಿಯಲ್ ಎಸ್ಟೇಟ್ ಹಾಗೂ ಪಬ್ಲಿಕ್ ಈಕ್ವಿಟಿ ಸೇರಿದಂತೆ ವಿವಿಧ ಆಸ್ತಿ ವರ್ಗಗಳಲ್ಲಿ 79 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿದೆ. 25ಕ್ಕೂ ಹೆಚ್ಚು ವರ್ಷಗಳ ಟಿಪಿಜಿ ಇತಿಹಾಸದಲ್ಲಿ, ಅದು ನೂರಾರು ಪೋರ್ಟ್‌ಫೋಲಿಯೋ ಕಂಪನಿಗಳಿಂದ ಕೂಡಿದ ಇಕೋಸಿಸ್ಟಂ ಅನ್ನು ನಿರ್ಮಿಸಿದೆ ಹಾಗೂ ವೃತ್ತಿಪರರು, ಕಾರ್ಯನಿರ್ವಾಹಕರು ಮತ್ತು ಸಲಹೆಗಾರರ ಮೌಲ್ಯವರ್ಧಿತ ವಿಶ್ವವ್ಯಾಪಿ ಜಾಲವನ್ನು ನಿರ್ಮಿಸಿದೆ. ಏರ್‌ಬಿಎನ್‌ಬಿ, ಉಬರ್ ಮತ್ತು ಸ್ಪಾಟಿಫೈ ಮುಂತಾದ ಹಲವು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಇದರ ಹೂಡಿಕೆ ಇದೆ.
ರಿಲಯನ್ಸ್ಗೆ 10 ಕಂಪನಿಗಳಿಂದ ಹೂಡಿಕೆ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮಾತನಾಡಿ, "ಇಂದು, ಡಿಜಿಟಲ್ ಇಕೋಸಿಸ್ಟಂ ರೂಪಿಸುವ ಮೂಲಕ ಭಾರತೀಯರ ಜೀವನವನ್ನು ಡಿಜಿಟಲ್ ಸಬಲೀಕರಣಗೊಳಿಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಟಿಪಿಜಿಯನ್ನು ಮೌಲ್ಯಯುತ ಹೂಡಿಕೆದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನೂರಾರು ದಶಲಕ್ಷ ಗ್ರಾಹಕರು ಮತ್ತು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ, ನಾವು ವಾಸಿಸುವ ಸಮಾಜವನ್ನು ಉತ್ತಮಗೊಳಿಸುವ ಜಾಗತಿಕ ತಂತ್ರಜ್ಞಾನ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಟಿಪಿಜಿಯ ದಾಖಲೆಯಿಂದ ನಾವು ಪ್ರಭಾವಿತರಾಗಿದ್ದೇವೆ" ಎಂದು ಹೇಳಿದ್ದಾರೆ.
ಟಿಪಿಜಿಯ ಸಹ-ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಕೌಲ್ಟರ್ ಮಾತನಾಡಿ, "ಜಿಯೋದಲ್ಲಿ ಹೂಡಿಕೆಗಾಗಿ ರಿಲಯನ್ಸ್‌ನೊಡನೆ ಕೈಜೋಡಿಸಲು ನಾವು ಉತ್ಸುಕರಾಗಿದ್ದೇವೆ. 25 ವರ್ಷಗಳಿಂದ ಬೆಳವಣಿಗೆ, ಬದಲಾವಣೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆದಾರರಾಗಿ ಮತ್ತು ಭಾರತದಲ್ಲಿ ದೀರ್ಘಕಾಲದ ಉಪಸ್ಥಿತಿಯೊಂದಿಗೆ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸಲು ಮತ್ತು ಮುನ್ನಡೆಸಲು ಮುಂದುವರಿಯುತ್ತಿರುವ ಜಿಯೋದ ಯಾತ್ರೆಯಲ್ಲಿ ಆರಂಭಿಕ ಪಾತ್ರ ವಹಿಸಲು ನಾವು ಉತ್ಸುಕರಾಗಿದ್ದೇವೆ. ಉದ್ಯಮದಲ್ಲಿ ಪರಿವರ್ತನೆಗಳನ್ನು ತರುವ ಮೂಲಕ ನಾಯಕತ್ವ ಸ್ಥಾನದಲ್ಲಿರುವ ಜಿಯೋ, ಮಹತ್ವದ ಹಾಗೂ ಉತ್ತಮ - ಗುಣಮಟ್ಟದ ಡಿಜಿಟಲ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಾದ್ಯಂತ ಸಣ್ಣ ಉದ್ಯಮಗಳು ಮತ್ತು ಗ್ರಾಹಕರನ್ನು ಸಶಕ್ತರನ್ನಾಗಿಸುತ್ತಿದೆ. ಸಾಟಿಯಿಲ್ಲದ ಸಾಮರ್ಥ್ಯ ಮತ್ತು ಕಾರ್ಯಗತಗೊಳಿಸುವ ಶಕ್ತಿಯನ್ನು ಮಾರುಕಟ್ಟೆಗೆ ಪರಿಚರಿಸುತ್ತಿರುವ ಸಂಸ್ಥೆಯು ಮುಂಬರುವ ಎಲ್ಲ ತಂತ್ರಜ್ಞಾನ ಸಂಸ್ಥೆಗಳಿಗೆ ಮಾದರಿಯಾಗಿದೆ" ಎಂದು ಹೇಳಿದ್ದಾರೆ.
ಟಿಪಿಜಿಯು ತನ್ನ ಕ್ಯಾಪಿಟಲ್ ಏಷ್ಯಾ, ಟಿಪಿಜಿ ಗ್ರೋಥ್, ಮತ್ತು ಟಿಪಿಜಿ ಟೆಕ್ ಅಡ್ಜಸೆನ್ಸೀಸ್ (ಟಿಟಿಎಡಿ) ಫಂಡ್‌ಗಳಿಂದ ಈ ಹೂಡಿಕೆಯನ್ನು ಮಾಡುತ್ತಿದೆ. ಈ ವಹಿವಾಟು ರೂಢಿಗತ ಷರತ್ತುಗಳ ಪೂರ್ವನಿದರ್ಶನಕ್ಕೆ ಒಳಪಟ್ಟಿರುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಅಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಅಂಡ್ ವಾರ್ಡ್‌ವೆಲ್ ಈ ವಹಿವಾಟಿಗೆ ಸಲಹೆ ನೀಡಿದ್ದಾರೆ. ಶಾರ್ದೂಲ್ ಅಮರ್‌ಚಂದ್ ಮಂಗಲ್‌ದಾಸ್ ಅಂಡ್ ಕೋ. ಟಿಪಿಜಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.