ಹೈದರಾಬಾದ್ :ಭಾರತದ ಸಾರ್ವಭೌಮತೆ, ಸುರಕ್ಷತೆ ಹಾಗೂ ಐಕ್ಯತೆಗೆ ಧಕ್ಕೆ ಉಂಟು ಮಾಡುತ್ತಿರುವ ಆರೋಪದ ಮೇಲೆ ಚೀನಾ ನಿಯಂತ್ರಿತ ಟಿಕ್‌ಟಾಕ್, ಶೇರ್ ಇಟ್ ಸೇರಿದಂತೆ 59 ಆ್ಯಪ್ಗಳನ್ನು ಭಾರತ ಸರ್ಕಾರ ಸೋಮವಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಗಾಲ್ವಾನ್ ವ್ಯಾಲಿಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ದೇಶದಲ್ಲಿ ಚೀನಾ ಹಾಗೂ ಚೀನಾ ವಸ್ತುಗಳ ವಿರುದ್ಧ ದಿನೇದಿನೆ ಆಕ್ರೋಶ ಹೆಚ್ಚಾಗುತ್ತಿದೆ.
ಇದೇ ಹಿನ್ನೆಲೆ ಮೊಬೈಲ್ನಲ್ಲಿರುವ ಚೀನಾ ಆ್ಯಪ್ಗಳನ್ನು ಸಹ ಅನ್ ಇನ್‌ಸ್ಟಾಲ್ ಮಾಡುವ ಅಭಿಯಾನ ಜೋರಾಗಿ ನಡೆಯುತ್ತಿದೆ. ಈ ಚೀನಾ ಆ್ಯಪ್ಗಳಿಲ್ಲದಿದ್ದರೆ ಮುಂದೇನು ಎಂದು ಚಿಂತಿಸಬೇಕಿಲ್ಲ. ಅವಕ್ಕೂ ಚೆನ್ನಾಗಿರುವ ಇತರ ಹಲವಾರು ಆ್ಯಪ್ಗಳು ಈಗಾಗಲೇ ಲಭ್ಯವಿವೆ.
ಯಾವ ಉದ್ದೇಶಕ್ಕೆ ಯಾವ ಆ್ಯಪ್ಗಳ ಬಳಕೆ, ಇಲ್ಲಿದೆಮಾಹಿತಿ:
ಮೊಬೈಲ್ ಫೋನ್ ಸುರಕ್ಷತೆ ಹಾಗೂ ಆ್ಯಪ್ ಲಾಕ್ ಮಾಡಲು
ಮೊಬೈಲ್ನಲ್ಲಿರುವ ಫೋಟೋ, ವಿಡಿಯೋಗಳು ಇತರರಿಗೆ ಕಾಣದಂತೆ ಹೈಡ್ ಮಾಡಲು ಚೀನಾದ ಆ್ಯಪ್‌ಲಾಕ್, ವಾಲ್ಟ್ ಹೈಡ್ ಮುಂತಾದ ಆ್ಯಪ್ಗಳನ್ನು ಬಳಸಲಾಗುತ್ತಿದೆ. ಇವುಗಳ ಬದಲಿಗೆ ಲಾಕ್ ಆ್ಯಪ್-ಸ್ಮಾರ್ಟ್ ಆ್ಯಪ್ ಲಾಕರ್ (Lock App-Smart App Locker), ಲಾಕ್ ಆ್ಯಪ್-ಫಿಂಗರ್ ಪ್ರಿಂಟ್ (Lock App - Fingerprint), ಕೀಪ್ ಸೇಫ್ (KeepSafe), ನಾರ್ಟನ್ ಆ್ಯಪ್ ಲಾಕ್ (Norton App Lock), ಲಾಕ್ ಮೈ ಪಿಕ್ಸ್ ಸೀಕ್ರೆಟ್ ಫೋಟೊ ವಾಲ್ಟ್ (LockMyPix Secret Photo Vault) ಮುಂತಾದುವುಗಳನ್ನು ಬಳಸಬಹುದು.
ಬ್ರೌಸಿಂಗ್ ಸುರಕ್ಷತೆಗೆ
ಒಪೆರಾ ಮಿನಿ (Opera Mini), ಗೂಗಲ್ ಕ್ರೋಮ್ (Google Chrome), ಫೈರ್ ಫಾಕ್ಸ್ (Firefox Browser), ಜಿಯೊ ಬ್ರೌಸರ್ (JioBrowser) ಗಳು ಅತ್ಯಂತ ಕಾರ್ಯಕ್ಷಮತೆ ಹಾಗೂ ಸುರಕ್ಷತೆಯನ್ನು ಹೊಂದಿವೆ. ಚೀನಾದ ಯುಸಿ ಬ್ರೌಸರ್ (UC Browser) ಅವಲಂಬನೆ ಬೇಕಿಲ್ಲ.