ನವದೆಹಲಿ:ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಕೆನರಾ ಬ್ಯಾಂಕ್ ಮಾರ್ಚ್ 15 ಮತ್ತು 16 ರಂದು ಹಲವು ಬ್ಯಾಂಕ್ ಒಕ್ಕೂಟಗಳು ಪ್ರಸ್ತಾಪಿಸಿದ ಮುಷ್ಕರದಿಂದಾಗಿ ತಮ್ಮ ಕಾರ್ಯಾಚರಣೆಗಳಿಗೆ ತೊಂದರೆಯಾಗಬಹುದು ಎಂದು ಹೇಳಿವೆ.
ಕೇಂದ್ರ ಸರ್ಕಾರ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಖಾಸಗೀಕರಣಕ್ಕೆ ಮುಂದಾಗಿದ್ದು, ಇದನ್ನು ವಿರೋಧಿಸಿ ಬ್ಯಾಂಕ್ಗಳ ಒಕ್ಕೂಟ ಮಾರ್ಚ್ 15 ಮತ್ತು 16ರಂದು ಮುಷ್ಕರಕ್ಕೆ ಕರೆ ನೀಡಿವೆ. ಮುಷ್ಕರ ಕಾರ್ಯರೂಪಕ್ಕೆ ಬಂದರೆ, ಮುಂದಿನ ಶನಿವಾರದಿಂದ ಆರಂಭಗೊಂಡು ಸತತ ನಾಲ್ಕು ದಿನಗಳವರೆಗೆ ಬ್ಯಾಂಕ್ಗಳು ಮುಚ್ಚಲಿವೆ. ಇದರಿಂದ ಗ್ರಾಹಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಬ್ಯಾಂಕ್ಗಳು ತಮ್ಮ ನಿಯಮಿತ ರಜಾದಿನವಾದ ಮಾರ್ಚ್ 13 (ಎರಡನೇ ಶನಿವಾರ) ಮತ್ತು ಮಾರ್ಚ್ 14ರಂದು (ಭಾನುವಾರ) ಬಾಗಿಲು ಹಾಕಲಿವೆ.
ಇದನ್ನೂ ಓದಿ: ಓಪನ್ ಸೆಲ್ ಬೆಲೆ ಏರಿಕೆ.. ದುಬಾರಿಯಾಗಲಿವೆ ಎಲ್ಇಡಿ ಟಿವಿ
ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಒಕ್ಕೂಟಗಳು ಕರೆ ನೀಡಿರುವುದರಿಂದ ಮಾರ್ಚ್ 15 ಮತ್ತು 16ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಮಾರ್ಚ್ 15ರಂದು ಬ್ಯಾಂಕ್ ನೌಕರರು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ ಎಂದು ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ತಿಳಿಸಿದೆ.
ದೇಶದ ಅತಿದೊಡ್ಡ ಬ್ಯಾಂಕ್ ತನ್ನ ಶಾಖೆ ಮತ್ತು ಕಚೇರಿಗಳಲ್ಲಿ ಸಾಮಾನ್ಯ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ. ಪ್ರತಿಭಟನೆಯಿಂದ ಬ್ಯಾಂಕ್ನ ಕೆಲವು ಕೆಲಸಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದಿದೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್‌ಸಿಬಿಇ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‌ಐ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ (ಐಎನ್‌ಬಿಇಎಫ್), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಒಕ್ಕೂಟ (ಐಎನ್‌ಬಿಒಸಿ), ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ವರ್ಕರ್ಸ್ (ಎನ್‌ಒಬಿಡಬ್ಲ್ಯೂ) ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್ (ಎನ್‌ಒಬಿಒ) ಒಂಬತ್ತು ಒಕ್ಕೂಟಗಳು ಮುಷ್ಕರಕ್ಕೆ ಕರೆಕೊಟ್ಟಿವೆ.
ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಪೈಕಿ ಎರಡು ಬ್ಯಾಂಕ್ಗಳು ಹಾಗೂ ಒಂದು ವಿಮಾ ಕಂಪನಿ ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು.