ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ನಿಯಂತ್ರಿಸುವ ಉದ್ದೇಶದಿಂದ ಹಳೆಯ ಮಾಲಿನ್ಯಕಾರಕ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸುವುದನ್ನು ಸರ್ಕಾರ ಪ್ರಸ್ತಾಪಿಸಿದೆ. ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ನೀಡುತ್ತೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಇಂಧನದ ಮೇಲಿನ ಅವಲಂಬನೆ ತಗ್ಗಿಸಿ ಪರ್ಯಾಯ ಇಂಧನದತ್ತ ಸರ್ಕಾರ ನಾನಾ ತಜ್ಞರು ಹಾಗೂ ಸಂಸ್ಥೆಗಳ ಜತೆ ಚರ್ಚಿಸುತ್ತಿದೆ. ಸಮುದ್ರದಿಂದ ಹೈಡ್ರೋಜನ್ ತೆಗೆಯುವ ಪ್ರಯೋಗದಲ್ಲಿ ಚೆನ್ನೈ ಐಐಟಿ ಯಶಸ್ವಿಯಾಗಿದೆ. ಅವರೊಂದಿಗೆ ಸಚಿವಾಲಯ ಮಾತುಕತೆ ನಡೆಸುತ್ತಿದೆ. ಶೀಘ್ರವೇ ಪರ್ಯಾದ ತೈಲಗಳು ದೇಶದಲ್ಲಿ ಲಭ್ಯವಾಗಲಿವೆ ಎಂದರು.
ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ 15 ವರ್ಷ ಹಳೆಯದಾದ ಖಾಸಗಿ ವಾಹನಗಳಿಗೆ ಶೇ 10-15ರಷ್ಟು ಹಸಿರು ತೆರಿಗೆ ವಿಧಿಸುವುದನ್ನು ಪ್ರಸ್ತಾಪಿಸಲಾಗಿದೆ. ಇದರ ಜತೆಗೆ 8 ವರ್ಷ ಹಳೆಯದಾದ ವಾಣಿಜ್ಯ ವಾಹನಗಳಿಗೂ ತೆರಿಗೆ ಹೇರುವುದನ್ನು ಸೇರಿಸಲಾಗಿದೆ. ತೆರಿಗೆ ವಿಧಿಸುವ ಅಧಿಕಾರವನ್ನು ನಾವು ರಾಜ್ಯಗಳಿಗೆ ನೀಡುಬೇಕು ಎಂದು ಕೊಂಡಿದ್ದೇವೆ. ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬದನ್ನು ಚರ್ಚಿಸುವ ಜವಾಬ್ದಾರಿ ಸಲಹಾ ಸಮಿತಿಗೆ ವಹಿಸಲಾಗಿದೆ ಎಂದು ಹೇಳಿದರು.