ಬೆಂಗಳೂರು: ನವೋದ್ಯಮಗಳ ವೇಗ ವರ್ಧಿಸಲು ಹಾಗೂ ಅವುಗಳು ದೇಶ ವಿದೇಶಗಳ ಮಾರುಕಟ್ಟೆಗೆ ಪ್ರವೇಶಿಸಲು ಸಹಾಯಕವಾಗಲು ಉದ್ಯಮದವರ ಸಹಯೋಗದೊಂದಿಗೆ ಅಕ್ಸಲರೇಷನ್ ಪ್ರೋಗ್ರಾಮ್ (Acceleration Programme)ನ್ನು ಪ್ರಾರಂಭಿಸಲಾಗುವುದು ಎಂದು ಇಂದಿನ ಬಜೆಟ್ ಮಂಡನೆಯಲ್ಲಿ ಬಿಎಸ್ವೈ ಘೋಷಿಸಿದ್ದಾರೆ.
2020-21ನೇ ಸಾಲಿನಲ್ಲಿ ಮೂರು ಕೋಟಿ ರೂ.ಗಳ ಅನುದಾನವನ್ನು ಒದಗಿಸಲಿದ್ದು, ರಾಜ್ಯದ 11 ಜಿಲ್ಲೆಗಳಲ್ಲಿ ಕಾರ್ಯಾಚರಣೆಯಲ್ಲಿರುವ ‘ಸಂಚಾರಿ ಡಿಜಿಟಲ್ ತಾರಾಲಯಗಳು’, ಖಗೋಳ ವಿಜ್ಞಾನದ ವಿಸ್ಮಯಗಳ ಬಗ್ಗೆ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಯಶಸ್ವಿಯಾಗಿವೆ. ಈ ಸೌಲಭ್ಯವನ್ನು ಐದು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಐದು ಇತರೆ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದಿದ್ದಾರೆ.
ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶಿಕ್ಷಣ ನೀಡಲು ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು. ಪ್ರಮುಖ ವಿಜ್ಞಾನ ಸಂಸ್ಥೆಗಳ ಮೂಲಕ ಸುಮಾರು 500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಎರಡು ವರ್ಷಗಳವರೆಗೆ ಶಿಕ್ಷಣ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 1000 ರೂ.ಗಳ ಶಿಷ್ಯವೇತನವನ್ನು ನೀಡಲಾಗುವುದು ಎಂದು ತಿಳಿಸಿದರು.