ಮುಂಬೈ, ಮಹಾರಾಷ್ಟ್ರ :ಮುಂಬೈ ಷೇರು ಮಾರುಕಟ್ಟೆಯ ವಹಿವಾಟು 697 ಪಾಯಿಂಟ್‌ಗಳ ಏರಿಕೆಯೊಂದಿಗೆ ಕೊನೆಗೊಂಡಿದೆ. ಈ ದಿನದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಐಟಿಸಿ ಮುಂತಾದ ಕಂಪನಿಗಳ ಪ್ರಭಾವ ಹೆಚ್ಚಾಗಿದೆ. 30 ಕಂಪನಿಗಳ ಎಸ್‌ಆ್ಯಂಡ್ ಪಿ ಬಿಎಸ್‌ಇ ಸೆನ್ಸೆಕ್ಸ್ 696.81 ಪಾಯಿಂಟ್‌ಗಳ ಹೆಚ್ಚಳದೊಂದಿಗೆ 57,989.30 ಪಾಯಿಂಟ್‌ಗಳಿಗೆ ತಲುಪಿದೆ.
ಹಿಂದಿನ ದಿನದ ವಹಿವಾಟು ಮುಕ್ತಾಯವಾದಾಗ 57,292.49 ಪಾಯಿಂಟ್ಗಳಿದ್ದು, ಇಂದು ಶೇಕಡಾ 1.22ರಷ್ಟು ಏರಿಕೆ ಕಂಡು ಬಂದಿದೆ. ಇದಕ್ಕೂ ಮೊದಲು, ಸೆನ್ಸೆಕ್ಸ್ 57,297.57 ಪಾಯಿಂಟ್‌ಗಳಲ್ಲಿದ್ದಾಗ ಸ್ವಲ್ಪ ಮಟ್ಟದ ಏರಿಕೆ ಕಂಡು ಬಂದು, ಶೀಘ್ರದಲ್ಲೇ ಸ್ವಲ್ಪ ಮಟ್ಟದ ಇಳಿಕೆ ಕಂಡು ಬಂದಿತ್ತು. ಮಧ್ಯಾಹ್ನ 1 ಗಂಟೆಯವರೆಗೂ ಸೆನ್ಸೆಕ್ಸ್ ಋಣಾತ್ಮಕ ವಹಿವಾಟು ನಡೆಸಿತ್ತು.
ಇಂಟ್ರಾ-ಡೇ ವಹಿವಾಟು ಅಂದರೆ ಒಂದೇ ದಿನದಲ್ಲಿ ಷೇರುಗಳನ್ನು ಖರೀದಿಸಿ, ಅದೇ ದಿನ ಷೇರುಗಳನ್ನು ಮಾರುವ ವಹಿವಾಟಿನ ಸೆನ್ಸೆಕ್ಸ್ ಸೂಚ್ಯಂಕ ಗರಿಷ್ಠ 58,052.87 ಅಂಕಗಳನ್ನು ಮತ್ತು ಕನಿಷ್ಠ 56,930.30 ಅಂಕಗಳನ್ನು ಮುಟ್ಟಿತು. ಸೋಮವಾರದ ವಹಿವಾಟಿಗೆ ಹೋಲಿಸುವುದಾದರೆ 571.44 ಪಾಯಿಂಟ್ ಅಥವಾ ಶೇ. 0.99ರಷ್ಟು ಇಳಿಕೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯದ ನಿಫ್ಟಿ-50 197.90 ಪಾಯಿಂಟ್ ಅಥವಾ 1.16 ಶೇಕಡಾ ಏರಿಕೆಯಾಗಿದೆ. ಈ ಮೂಲಕ ಹಿಂದಿನ ದಿನಕ್ಕೆ ಮುಕ್ತಾಯವಾಗಿದ್ದ 17,117.60 ಪಾಯಿಂಟ್‌ಗಳಿಂದ 17,315.50 ಪಾಯಿಂಟ್‌ಗಳಿಗೆ ಏರಿತು. ನಿಫ್ಟಿ ಸೋಮವಾರ 169.45 ಪಾಯಿಂಟ್ ಅಥವಾ ಶೇ.0.98ರಷ್ಟು ಇಳಿಕೆ ಕಂಡಿತ್ತು.
ಕುಸಿತವನ್ನು ಸರಿದೂಗಿಸಿಕೊಂಡ ರೂಪಾಯಿ :ಸೋಮವಾರಷ್ಟೇ ಅಮೆರಿಕನ್ ಡಾಲರ್ ಎದುರು 34 ಪೈಸೆ ಕುಸಿತ ಕಂಡು ಒಂದು ಡಾಲರ್ಗೆ 76.18 ರೂಪಾಯಿ ತಲುಪಿದ್ದ ಭಾರತದ ಕರೆನ್ಸಿ ಇಂದು ಸ್ಥಿರತೆ ಕಾಯ್ದುಕೊಂಡಿದೆ. ದೇಶಿಯ ಷೇರುಗಳಲ್ಲಿ ಸಕಾರಾತ್ಮಕ ಬೆಳವಣಿಗೆಯಾದ ಕಾರಣದಿಂದ ಆರಂಭಿಕ ವಹಿವಾಟಿನಲ್ಲಿ ಆಗಿದ್ದ ನಷ್ಟವನ್ನು ಸರದೂಗಿಸಿಕೊಂಡಿದೆ.