ಮುಂಬೈ: ಈಕ್ವಿಟಿ ಮಾರುಕಟ್ಟೆ ಸೆನ್ಸೆಕ್ಸ್ ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮೊದಲ ಬಾರಿಗೆ 44,000 ಗಡಿ ದಾಟಿದೆ, ಏಷ್ಯಾದ ಇತರ ಮಾರುಕಟ್ಟೆಗಳ ಸಕಾರಾತ್ಮಕ ವಹಿವಾಟು ಮತ್ತು ನಿರಂತರ ವಿದೇಶಿ ಸಂಪತ್ತಿನ ಒಳಹರಿವಿನ ನಡುವೆ ಬ್ಯಾಂಕಿಂಗ್ ಷೇರುಗಳು ಲಾಭ ಹೆಚ್ಚಿಸಿಕೊಂಡಿದೆ.
ಇಂದು ತನ್ನ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ 44,000 ಗಡಿ ದಾಟಿದ ನಂತರ , ಮುಂಬೈ ಷೇರು ವಿನಿಮಯ ಕೇಂದ್ರದ ದಿನದ ಸೂಚ್ಯಂಕವು ಆರಂಭಿಕ 55.15 ಪಾಯಿಂಟ್‌ಗಳ ಅಥವಾ ಶೇ 0.13 ರಷ್ಟು ಹೆಚ್ಚಳವಾಗಿ 44,007.86 ರಷ್ಟು ವಹಿವಾಟು ನಡೆಸುತ್ತಿದ್ದವು. ಅದೇ ರೀತಿ NSE ( ರಾಷ್ಟ್ರೀಯ ಷೇರುಪೇಟೆ) ನಿಫ್ಟಿ 19.10 ಪಾಯಿಂಟ್‌ಗಳು ಅಥವಾ ಶೇ 0.15 ರಷ್ಟು ಮುನ್ನಡೆ ಸಾಧಿಸಿ 12,893.30 ಕ್ಕೆ ತಲುಪಿದೆ.
ಪ್ರಮುಖ 30 ಕಂಪನಿಗಳ ಷೇರುಗಳ ಪೈಕಿ 21 ಕಂಪನಿ ಷೇರುಗಳು ಏರಿಕೆ ಕಂಡರೆ, 9 ಕಂಪನಿಗಳ ಷೇರುಗಳು ಕುಸಿದಿವೆ. ಪವರ್‌ಗ್ರಿಡ್ ಶೇ.1 ರಷ್ಟು ಏರಿಕೆ ಕಂಡಿದ್ದು, ಎಸ್‌ಬಿಐ, ಎಂ ಆ್ಯಂಡ್ ಎಂ, ಎಲ್ ಆಂಡ್ ಟಿ, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಒಎನ್‌ಜಿಸಿ ನಂತರದ ಸ್ಥಾನಗಳಲ್ಲಿದ್ದು, ಷೇರುಗಳ ಬೆಲೆ ಹೆಚ್ಚಿಸಿಕೊಂಡಿವೆ. ಮತ್ತೊಂದೆಡೆ, ಎಚ್‌ಯುಎಲ್, ಟೈಟಾನ್, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ ಮತ್ತು ಟಿಸಿಎಸ್ ಕಂಪನಿಗಳ ಷೇರುಗಳು ಕುಸಿತ ಕಂಡಿವೆ.