ನವದೆಹಲಿ:ದೇಶದ ಅತಿದೊಡ್ಡ ಬ್ಯಾಂಕಾದ ಎಸ್‌ಬಿಐ ದೇಶದ ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಲ ನೀಡಲು ಅದಾನಿ ಗ್ರೂಪ್ ಜತೆ ಒಪ್ಪಂದ ವೊಂದಕ್ಕೆ ಸಹಿ ಹಾಕಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದಾನಿ ಗ್ರೂಪ್‌ನ ಅಂಗವಾದ ಅದಾನಿ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ರೈತರಿಗೆ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣಗಳ ಖರೀದಿಗಾಗಿ ಸಾಲ ಸೌಲಭ್ಯ ನೀಡಲು, ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಾಗಿ ಈ ಒಡಂಬಡಿಕೆ ಮಾಡಿಕೊಂಡಿವೆ.
ಈ ಪಾಲುದಾರಿಕೆಯು ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣವನ್ನು ಅಳವಡಿಸಿಕೊಳ್ಳಲು ಬಯಸುವ ದೇಶದ ರೈತರಿಗೆ ಸಾಲ ಸೌಲಭ್ಯ ನೀಡುವುದರ ಮೂಲಕ, ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದೇ ಮುಖ್ಯ ಧ್ಯೇಯವಾಗಿದೆ ಎಂದು ಎಸ್‌ಬಿಐ ತಿಳಿಸಿದೆ.
ಇದನ್ನೂ ಓದಿ: ಚೇತರಿಕೆ ಹಾದಿಗೆ ಮರಳಿದ ಮುಂಬೈ ಷೇರುಪೇಟೆ; ದಿನದಾಂತ್ಯಕ್ಕೆ ಸೆನ್ಸೆಕ್ಸ್ 620 ಅಂಕಗಳ ಜಿಗಿತ
ರೈತರ ಆದಾಯ ದ್ವಿಗುಣಗೊಳಿಸಲು, ಕೃಷಿ ಯಾಂತ್ರೀಕರಣ, ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒಗಳು) ಇತ್ಯಾದಿಗಳಿಗೆ ಹಣಕಾಸಿನ ನೆರವು ಒದಗಿಸಲು ಎಸ್‌ಬಿಐ ಮುಂದಾಗಿದೆ. ಇದು ದೇಶದ ಕೃಷಿ ಕ್ಷೇತ್ರ ಮತ್ತು ರೈತರ ಅಭ್ಯುದಯಕ್ಕೆ ಸಹಕಾರಿಯಾಗಲಿದೆ ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.