ನವದೆಹಲಿ:ಖ್ಯಾತ ಐಟಿ ಕಂಪನಿಯಾದ ಇನ್ಫೋಸಿಸ್ ಸಹಸಂಸ್ಥಾಪಕರಲ್ಲಿ ಒಬ್ಬರಾದ ಎಸ್.ಡಿ ಶಿಬುಲಾಲ್ ಅವರು ತಮ್ಮ ಕಂಪನಿಯ 100 ಕೋಟಿ ರೂ. ಮೌಲ್ಯದ ಷೇರನ್ನು ತಮ್ಮ ಪತ್ನಿ ಕುಮಾರಿ ಶಿಬುಲಾಲ್ ಅವರಿಂದ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ಖರೀದಿಸಿದ್ದಾರೆ.
ಈ ಮೂಲಕ ಒಂದೇ ವಾರದಲ್ಲಿ ಎರಡು ಬಾರಿ ಪತ್ನಿ ಬಳಿ ಶಿಬುಲಾಲ್ ಇನ್ಫೋಸಿಸ್ ಷೇರು ಖರೀದಿಸಿದಂತಾಗಿದೆ. ಮುಕ್ತ ಮಾರುಕಟ್ಟೆ ಒಪ್ಪಂದಗಳ ಮೂಲಕ ಮೇ 12 ರಂದು 100 ಕೋಟಿ ರೂ., ಮೇ 19 ರಂದು 100 ಕೋಟಿ ರೂ. ಮತ್ತು ಮೇ 24 ರಂದು ಕುಮಾರಿ ಶಿಬುಲಾಲ್ರಿಂದ 100 ಕೋಟಿ ರೂ. ಮೌಲ್ಯದ ಷೇರನ್ನು ಶಿಬುಲಾಲ್ ಖರೀದಿಸಿದ್ದರು.
ಇದೀಗ ಮೇ 27ರಂದು ಕುಮಾರಿ ಶಿಬುಲಾಲ್ ಅವರಿಂದ ಇನ್ಫೋಸಿಸ್ನ ಶೇ.0.02 ರಷ್ಟು ಅಥವಾ 7,22,545 ಈಕ್ವಿಟಿ ಷೇರುಗಳನ್ನು ಖರೀದಿಸಿರುವುದಾಗಿ ಸ್ವತಃ ಶಿಬುಲಾಲ್ ತಿಳಿಸಿದ್ದಾರೆ. ಈ ವಹಿವಾಟಿನ ನಂತರ ಇನ್ಫೋಸಿಸ್ ಕಂಪನಿಯಲ್ಲಿ ಶಿಬುಲಾಲ್ ಅವರ ಪಾಲು ಶೇ. 0.12 ಕ್ಕೆ ಏರಿಕೆಯಾಗಿದ್ದರೆ, ಕುಮಾರಿ ಶಿಬುಲಾಲ್ ಅವರು ಶೇ 0.14 ರಷ್ಟು ಷೇರುಪಾಲು ಹೊಂದಿದ್ದಾರೆ.
ಇದನ್ನೂ ಓದಿ:ಇನ್ಫೋಸಿಸ್ನಲ್ಲಿ 1,000 ಹೊಸ ಉದ್ಯೋಗಿಗಳ ನೇಮಕ : ಇಂಜಿನಿಯರ್ ಪದವೀಧರರಿಗೆ ಅವಕಾಶ
ಇತ್ತೀಚೆಗಷ್ಟೇ ಇನ್ಫೋಸಿಸ್ ಕಂಪನಿಯು, ಆರೋಗ್ಯ ಮತ್ತು ಸ್ವಾಸ್ಥ್ಯದ ದೃಷ್ಟಿಯಿಂದ ತಮ್ಮ ಉದ್ಯೋಗಿಗಳು ಮತ್ತು ಅವರ ಕುಟುಂಬದ ಲಸಿಕೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿತ್ತು. ಹಾಗೆಯೇ ದೇಶದ ಆರ್ಥಿಕ ಚೇತರಿಕೆ ಮತ್ತು ಬೆಳವಣಿಗೆ ಬೆಂಬಲಿಸುವ ಪ್ರಯತ್ನಗಳ ಭಾಗವಾಗಿ ಮುಂದಿನ ಮೂರು ವರ್ಷಗಳಲ್ಲಿ ಬ್ರಿಟನ್ನಲ್ಲಿ 1,000 ನೌಕರರನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ಇನ್ಫೋಸಿಸ್ ಹೇಳಿದೆ.