ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಮದು - ರಫ್ತಿನಲ್ಲಿ ವಹಿವಾಟಿನ ಮಧ್ಯವರ್ತಿಯಾಗಿದ್ದ ಡಾಲರ್ ಪ್ರಭಾವ ತಗ್ಗಿಸಲು ಪಿಎಂ ಮೋದಿ ರೂಪಿಸಿದ್ದ ಬದಲಿ ಕರೆನ್ಸಿ ವಹಿವಾಟು ಚಲಾವಣೆಯು ಕಾರ್ಯಗತವಾಗುತ್ತಿದೆ.
ಸಾಗರೋತ್ತರ ಮಾರುಕಟ್ಟೆಯ ಒಪ್ಪಂದಗಳಲ್ಲಿ ಡಾಲರ್ ಬದಲಿಗೆ ಆಯಾ ರಾಷ್ಟ್ರಗಳ ಸ್ಥಳೀಯ ಕರೆನ್ಸಿ ವಿನಿಮಯದ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಭಾರತದ ಕೆಲವು ಆಪ್ತರಾಷ್ಟ್ರಗಳ ಮುಂದಿಟ್ಟಿದ್ದರು. ಇದಕ್ಕೆ ಬಹುತೇಕ ರಾಷ್ಟ್ರಗಳ ಸಮ್ಮತಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ರಷ್ಯಾ ಡಾಲರ್ ಬದಲಿಗೆ ಯುರೋ ಕರೆನ್ಸಿ ಸ್ವೀಕಾರಕ್ಕೆ ಅಸ್ತು ಎಂದಿದೆ.
ಭಾರತ - ರಷ್ಯಾ ಕಳೆದ ವರ್ಷ ₹ 40 ಸಾವಿರ ಕೋಟಿ ಮೊತ್ತದ ಐತಿಹಾಸಿಕ ಎಸ್ - 400 ಟ್ರಯಂಫ್ ಕ್ಷಿಪಣಿ ಸರಬರಾಜು ವಾಯು ರಕ್ಷಣೆಗೆ ಸಹಿ ಹಾಕಿದ್ದವು. ಒಪ್ಪಂದ ಮೊತ್ತವನ್ನು ರಷ್ಯಾದ ವಿಟಿಬಿ ಬ್ಯಾಂಕ್ ಯುರೋ ಕರೆನ್ಸಿ ಮೂಲಕ ಸ್ವೀಕರಿಸಲು ಹಸಿರು ನಿಶಾನೆ ತೋರಿದೆ. ಇದರಿಂದ ಭಾರತಕ್ಕೆ ಮಿಲಿಟರಿ ತಂತ್ರಜ್ಞಾನ ಖರೀದಿಗೆ ಅಮೆರಿಕದ ನಿರ್ಬಂಧಗಳ ಅಪಾಯ ಹಾಗೂ ಡಾಲರ್ ಮೇಲಿನ ಅವಲಂಬನೆ ತಪ್ಪಲಿದೆ.
ಈ ಹಿಂದೆಯೂ ಅಸ್ತಿತ್ವದಲ್ಲಿರುವ ರಕ್ಷಣಾ ವಹಿವಾಟುಗಳಿಗಾಗಿ ಭಾರತವು ರೂಪಾಯಿ - ರೂಬೆಲ್ ಮೂಲಕ ಕೆಲವು ಪಾವತಿಗಳನ್ನು ಮಾಡುತ್ತಿತ್ತು. ಇದರ ಮಧ್ಯೆ ರಷ್ಯಾದ ವಿಟಿಬಿ ಬ್ಯಾಂಕ್ ಯುರೋ ಕರೆನ್ಸಿ ಸ್ವೀಕರಿಸಲು ಸಮ್ಮತಿಸಿದೆ.
ಶತ್ರುಗಳಿಂದ ನಡೆಯಬಹುದಾದ ಪ್ರತಿದಾಳಿಯನ್ನು ಎಸ್ - 400 ಸಮರ್ಪಕವಾಗಿ ತಡೆಯಬಲ್ಲದು. 400 ಕಿ.ಮೀ. ದೂರದಲ್ಲಿರುವ ಶತ್ರುಗಳ ಯುದ್ಧ ವಿಮಾನ, ಕ್ಷಿಪಣಿ ಮತ್ತು ಡ್ರೋನ್ಗಳನ್ನು ಕ್ಷಣಾರ್ಧದಲ್ಲಿ ಹೊಡೆದುರುಳಿಸಬಹುದು. ಸೆಕೆಂಡ್ಗೆ 4.8 ಕಿ.ಮೀ. ವೇಗದಲ್ಲಿ ಹಾರಬಲ್ಲ ಟ್ರಯಂಫ್, ಗಂಟೆಗೆ 17 ಸಾವಿರ ಕಿ.ಮೀ. ವೇಗದಲ್ಲಿ ಟಾರ್ಗೆಟ್ ಬಳಿ ನುಗ್ಗುವ ಅತ್ಯಾಧುನಿಕ ಕ್ಷಿಪಣಿ. 400 ಕಿಮೀ ದೂರದ ಟಾರ್ಗೆಟ್‌ನ್ನು ಮಿಂಚಿನ ವೇಗದಲ್ಲಿ ಸಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.