ರಸ್ತೆ ನಿರ್ಮಾಣ ಎಂಜಿನಿಯರಿಂಗ್ ಕಂಪನಿಗಳ ಆದಾಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 8 ರಿಂದ 10 ಕುಸಿತವಾಗುವ ಅಂದಾಜು ಮಾಡಲಾಗಿದೆ. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದರಿಂದ ಈ ಕಂಪನಿಗಳ ಆದಾಯ ಕುಸಿತವಾಗಲು ಕಾರಣವೆನ್ನಲಾಗಿದೆ.
ಕ್ರಿಸಿಲ್ನಿಂದ ಗುಣಮಟ್ಟದ ರೇಟಿಂಗ್ ಪಡೆದ ಸುಮಾರು 300 ಕಂಪನಿಗಳ ಬೆಳವಣಿಗೆ ದರ 2017 ರಿಂದ 2020 ರ ಅವಧಿಯಲ್ಲಿ ಶೇ 17 ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಬೆಳವಣಿಗೆ ಶೇ 8 ರಿಂದ 10 ಕುಸಿತವಾಗಲಿದೆ.
ಕಳೆದ ಎರಡು ಆರ್ಥಿಕ ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಡಿಮೆ ಪ್ರಮಾಣದ ಕಾಮಗಾರಿಗಳನ್ನು ನೀಡುತ್ತಿರುವುದು ಕೂಡ ಆದಾಯ ಕಡಿಮೆಯಾಗಲು ಕಾರಣವಾಗಿದೆ. ಆದರೆ ಈ ವರ್ಷದಲ್ಲಿ ಲಾಕ್ಡೌನ್ ಕಾರಣದಿಂದ ಕೆಲಸ ಸ್ಥಗಿತವಾಗಿದ್ದರಿಂದ ಹಾಗೂ ಕಾರ್ಮಿಕರ ಕೊರತೆಯಿಂದ ಕೆಲಸ ಕುಂಠಿತಗೊಂಡಿದ್ದರಿಂದ ಬೆಳವಣಿಗೆ ದರ ಶೂನ್ಯಕ್ಕೂ ಕೆಳಗಿನ ಮಟ್ಟಕ್ಕೆ ಇಳಿದಿದೆ.
"ರಸ್ತೆ ಕಾಮಗಾರಿ ಕಂಪನಿಗಳ ಬಿಲ್ಲಿಂಗ್ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಆಗುತ್ತದೆ. ಆದರೆ ಮಾರ್ಚ್ 22 ರಂದು ಆರಂಭವಾದ ಲಾಕ್ಡೌನ್ನಿಂದ ವರ್ಷಾಂತ್ಯದ ಕೊನೆಯ ವಾರದಲ್ಲಿ ನಡೆಯಬೇಕಿದ್ದ ಪ್ರಮುಖ ಕೆಲಸಗಳು ನಿಂತವು. ಇನ್ನು ಈಗ ಲಾಕ್ಡೌನ್ ಮುಗಿದಿದ್ದರೂ ಮತ್ತೆ ಕೆಲಸಗಳು ಚುರುಕು ಪಡೆಯಲು ಸಮಯ ಹಿಡಿಯುತ್ತದೆ. ಹೀಗಾಗಿ ಒಟ್ಟಾರೆ ಶೇ 8 ರಿಂದ 10 ರಷ್ಟು ಆದಾಯ ಈ ಬಾರಿ ಕಡಿಮೆಯಾಗಲಿದೆ ಎನ್ನುತ್ತಾರೆ ಕ್ರಿಸಿಲ್ ರೇಟಿಂಗ್ಸ್ನ ಸೀನಿಯರ್ ಡೈರೆಕ್ಟರ್ ಸಚಿನ ಗುಪ್ತಾ.
ಲಾಕ್ಡೌನ್ ಕಾರಣದಿಂದ ರಸ್ತೆ ನಿರ್ಮಾಣ ಕಂಪನಿಗಳು ಏಪ್ರಿಲ್ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಏಪ್ರಿಲ್ನಲ್ಲಿ ಇವರಿಗೆ ಯಾವುದೇ ಆದಾಯವೂ ಬಂದಿಲ್ಲ. ಆದರೂ ನೌಕರರು ಹಾಗೂ ಇತರ ಆಫೀಸ್ ವೆಚ್ಚಗಳನ್ನು ಎಂದಿನಂತೆ ಅವರು ನಿಭಾಯಿಸಬೇಕಾಗಿದೆ.
ಬಹುಶಃ ಮುಂಗಾರು ಹಂಗಾಮಿನ ನಂತರ ಕಾರ್ಮಿಕರು ಕೆಲಸಕ್ಕೆ ಮರಳುವ ಸಾಧ್ಯತೆಯಿದ್ದು, ಅಲ್ಲಿಂದ ಮುಂದೆ ಕೆಲಸಕ್ಕೆ ವೇಗ ಬರಬಹುದು. ಕೊರೊನಾ ವೈರಸ್ ಎಷ್ಟು ಬೇಗ ನಿರ್ಮೂಲನೆಯಾಗುವುದೋ ಅಷ್ಟು ಬೇಗ ನಿರ್ಮಾಣ ವಲಯ ಅಭಿವೃದ್ಧಿ ಸಾಧಿಸಲಿದೆ.