ನವದೆಹಲಿ: ಭಾರತದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ. 6.01ಕ್ಕೆ ಏರಿಕೆಯಾಗಿದ್ದು, ಏಳು ತಿಂಗಳಲ್ಲಿ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಟಾಲರೆನ್ಸ್ ಬ್ಯಾಂಡ್‌ನ ಮೇಲಿನ ಮಿತಿ ದಾಟಿದೆ ಎಂದು ಸರ್ಕಾರದ ಅಂಕಿ - ಅಂಶಗಳು ತೋರಿಸಿವೆ.
ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಹಣದುಬ್ಬರವನ್ನು ಅಳೆಯಲಾಗುತ್ತದೆ. ಹಿಂದಿನ ತಿಂಗಳಲ್ಲಿ ಶೇ.5.66ರಷ್ಟು ಇದ್ದು, 2022 ರ ಜನವರಿಯಲ್ಲಿ ಶೇ. 6.01ಕ್ಕೆ ಏರಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಲೆ ಏರಿಕೆಯು ನಗರ ಪ್ರದೇಶಗಳಿಗಿಂತ ತೀಕ್ಷ್ಣವಾಗಿದೆ. ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಷ್ಟ್ರೀಯ ಅಂಕಿ- ಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗ್ರಾಮೀಣ ಹಣದುಬ್ಬರವು ಜನವರಿ 2022 ರಲ್ಲಿ ಶೇ.5.36 ರಿಂದ ಶೇ. 6.12 ಕ್ಕೆ ಏರಿಕೆ ಕಂಡಿದೆ.
ನಗರ ಪ್ರದೇಶದ ಸಿಪಿಐ ಹಣದುಬ್ಬರವು ಜನವರಿಯಲ್ಲಿ ಶೇ.5.91 ಇದ್ದು, ಹಿಂದಿನ ತಿಂಗಳಲ್ಲಿ ಶೇ.5.90 ರಷ್ಟು ಇತ್ತು. ಗ್ರಾಮೀಣ ಹಣದುಬ್ಬರವು ಜನವರಿ 2021 ರಲ್ಲಿ ಶೇಕಡಾ 3.23 ರಷ್ಟಿತ್ತು. ಇದು ಜನವರಿ 2022 ರಲ್ಲಿ ಶೇಕಡಾ 6.12 ಕ್ಕೆ ಏರಿಕೆಯಾಗಿದೆ. ಆದರೆ ನಗರ ಪ್ರದೇಶದಲ್ಲಿ ಜನವರಿ 2021 ರಲ್ಲಿ ಶೇ. 5.13ರಷ್ಟಿದ್ದ ಹಣದುಬ್ಬರವು ಜನವರಿ 2022ರಲ್ಲಿ ಶೇ. 5.91ಕ್ಕೆ ನಿಧಾನಗತಿಯಲ್ಲಿ ಏರಿದೆ.