ನವದೆಹಲಿ: ಹಕ್ಕಿನ ಷೇರು ವಿತರಣೆ ಯಶಸ್ವಿ ಆಗಿರುವುದರಿಂದ ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) ಷೇರು ಮೌಲ್ಯ ಕಳೆದ 3 ತಿಂಗಳಲ್ಲಿ 35ರಷ್ಟು ಏರಿಕೆಯಾಗಿದ್ದರಿಂದ ಇಂದು ಕಂಪನಿಯ ಮಾರುಕಟ್ಟೆ ಮೌಲ್ಯ 11.40 ಲಕ್ಷ ಕೋಟಿಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಸೋಮವಾರ 150 ಬಿಲಿಯನ್ ಡಾಲರ್ ಮೌಲ್ಯದ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿದೆ. ಷೇರು ಮೌಲ್ಯ ಬಿಎಸ್ಇನಲ್ಲಿ ಸಾರ್ವಕಾಲಿಕ ಗರಿಷ್ಠ 1,804 ರೂ. ಏರಿಕೆ ಆಗುವ ಮೂಲಕ ಮೂರು ತಿಂಗಳಲ್ಲಿ ಆರ್ಐಎಲ್ನ ಷೇರು ದ್ವಿಗುಣಗೊಂಡಿದೆ. ಮಾರ್ಚ್ 23ರಂದು 883.85 ರೂ.ಯಿಂದ ಎಸ್&ಪಿ ಬಿಎಸ್ಇ ಸೆನ್ಸೆಕ್ಸ್ನಲ್ಲಿ ಶೇ 35ರಷ್ಟು ಬೆಲೆ ಏರಿಕೆಯಾಗಿದೆ.
ತೈಲದಿಂದ ಟೆಲಿಕಾಂ ವಲಯದವರೆಗೂ ಹಬ್ಬಿದ ಜಾಗತಿಕ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ (ಮಾರುಕಟ್ಟೆ ಕ್ಯಾಪಿಟಲ್) ಶ್ರೇಯಾಂಕದಲ್ಲಿ 57ನೇ ಸ್ಥಾನದಲ್ಲಿದೆ. 2020ರ ಮಾರ್ಚ್ 24ರಂದು104ನೇ ಸ್ಥಾನದಲ್ಲಿತ್ತು. ಪ್ರಸಕ್ತ ಕ್ಯಾಲೆಂಡರ್ ವರ್ಷದ 2020ರ ಆರಂಭದಲ್ಲಿ 70ನೇ ಸ್ಥಾನದಲ್ಲಿತ್ತು ಎಂಬುದು ತಿಳಿದುಬಂದಿದೆ.