ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಶುಕ್ರವಾರ ಘೋಷಿಸಿದ ಉತ್ತೇಜನ ಕ್ರಮಗಳು ಲಾಕ್ಡೌನ್ ಜಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳ ಸುಧಾರಣೆಯ ಮೇಲೆ ಪರಿಣಾಮ ಬೀರಲಿವೆ ಎಂದು ದೇಶಿ ಉದ್ಯಮಿದಾರರು ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐನ ಇತ್ತೀಚಿನ ಕ್ರಮಗಳು ಉದ್ಯಮದ ಮೇಲಿನ ಸಾಲ ದರದ ಹೊರೆ ಇಳಿಯಲು ನೆರವಾಗಲಿದೆ. ಬ್ಯಾಂಕ್ಗಳು ಹಣವನ್ನು ಉತ್ಪಾದಕ ಕ್ಷೇತ್ರಗಳಿಗೆ ತೊಡಗಿಸಲು ಪ್ರೋತ್ಸಾಹಿಸಲಿವೆ. ಇದರಿಂದ ನಗದು ಪ್ರಮಾಣ ಏರಿಕೆಯಾಗಲಿದೆ ಮತ್ತು ವ್ಯವಸ್ಥೆಯಲ್ಲಿನ ಆರ್ಥಿಕ ಒತ್ತಡಕ್ಕೆ ಪರಿಹಾರ ಸಿಕ್ಕಂತಾಗಲಿದೆ ಎಂದಿದ್ದಾರೆ. ಕೊರೊನಾ ವೈರಸ್ ಹಬ್ಬುತ್ತಿರುವುದರಿಂದ ನಿಧಾನಗತಿಯ ಆರ್ಥಿಕತೆಯನ್ನು ರಕ್ಷಿಸುವ ಸರ್ಕಾರದ ಪ್ರಯತ್ನಗಳಿಗೆ ಆರ್‌ಬಿಐ ಸಹ ಕೈಜೋಡಿಸಿದಂತಾಗಿದೆ. ಆರ್‌ಬಿಐ ಎಲ್ಲ ಅವಧಿಯ ಸಾಲಗಳ ಮೇಲಿನ ಇಎಂಐ ಪಾವತಿಗಳನ್ನು ಮೂರು ತಿಂಗಳವರೆಗೆ ತಡೆಹಿಡಿದಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊವನ್ನು ಶೇ 4.4ಕ್ಕೆ ಕಡಿತಗೊಳಿಸಿದೆ. ಇದು 15 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದ ಬಡ್ಡಿ ದರವಾಗಿದೆ. ಜೊತೆಗೆ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾಂಕ್ಗಳು ನಿರ್ವಹಿಸುತ್ತಿರುವ ನಗದು ಮೀಸಲು ಅನುಪಾತ ಕಡಿಮೆ ಮಾಡಿದೆ. ಎಲ್ಲ ಬ್ಯಾಂಕುಗಳ ಸಿಆರ್ಆರ್ ಅನ್ನು 100 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 1.37 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ.
ಆರ್ಥಿಕತೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಪ್ರಸ್ತುತ ಪರಿಸ್ಥಿತಿ ಅತ್ಯಂತ ದುರ್ಬಲವಾಗಿದೆ. ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿತ್ತೀಯ ಪ್ರಚೋದನೆ ನೀಡುವ ವಿತ್ತೀಯ ಕ್ರಮಗಳ ಅಗತ್ಯವಿತ್ತು. ಆರ್‌ಬಿಐ ಈಗ ಅದನ್ನು ಕಾರ್ಯಗತಗೊಳಿಸಿದೆ. ಇದು ಆರ್ಥಿಕತೆ ಚೇತರಿಕೆಗೆ ಪ್ರಚೋದನೆ ನೀಡಲಿದೆ ಎಂದು ಫಿಕ್ಕಿ ಅಧ್ಯಕ್ಷ ಸಂಗಿತಾ ರೆಡ್ಡಿ ಹೇಳಿದ್ದಾರೆ.
ಇದು ನಗದು ಪ್ರಮಾಣ ಹೆಚ್ಚಿಸುವುದರ ಜೊತೆಗೆ ಕೋವಿಡ್-19 ವ್ಯಾಪಿಸುವುದಕ್ಕೆ ಮತ್ತು ಸೋಂಕಿನ ಪರಿಣಾಮದಿಂದ ಆರ್ಥಿಕ ಒತ್ತಡ ತಗ್ಗಿದಂತೆ ಆಗಲಿದೆ. ಸಿಆರ್ಆರ್ನ ಗಣನೀಯ ಇಳಿಕೆ ಬ್ಯಾಂಕ್ಗಳು ತಮ್ಮ ಸಾಲ ದರವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಆಗಲಿದೆ ಎಂದು ಸಿಐಐ ನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.