ಮುಂಬೈ:ಭಾರತೀಯ ರಿಸರ್ವ್ ಬ್ಯಾಂಕ್ನ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸಲಹೆ ಮೇರೆಗೆ ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಶಕ್ತಿಕಾಂತ ದಾಸ್ ನೇತೃತ್ವದಲ್ಲಿ ಫೆಬ್ರವರಿ 3ರಿಂದ ಇಂದಿನವರೆಗೆ ಸಭೆ ನಡೆಸಿರುವ ಹಣಕಾಸು ನೀತಿ ಸಮಿತಿಯು, ಪ್ರಸ್ತುತ ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸ್ಥಿತಿ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಿದೆ. 2021-22ರ ಕೇಂದ್ರ ಬಜೆಟ್ ಬಳಿಕ ಆರ್ಬಿಐ ನಡೆಸಿರುವ ಮೊದಲ ಎಂಪಿಸಿ ಸಭೆ ಇದಾಗಿದೆ.
ರೆಪೋ, ರಿವರ್ಸ್ ರೆಪೋ, ಬ್ಯಾಂಕ್ ದರದಲ್ಲಿ ಯಥಾಸ್ಥಿತಿ
ಸಭೆಯಲ್ಲಿ ಸರ್ವಾನುಮತದಿಂದ ರೆಪೋ ದರವನ್ನು ಶೇ.4 ರಲ್ಲೇ ಮುಂದುವರೆಸಿಕೊಂಡು ಹೋಗಲು ಎಂಪಿಸಿ ಸಮಿತಿ ನಿರ್ಧರಿಸಿದೆ. ಬ್ಯಾಂಕ್ ದರ ಹಾಗೂ ಎಂಎಸ್ಎಲ್ಆರ್ ದರ ಕೂಡಾ ಮೊದಲಿದ್ದ ಶೇ. 4.25 ರಲ್ಲಿ ಹಾಗೂ ರಿವರ್ಸ್ ರೆಪೋ ದರ ಶೇಕಡಾ 3.35 ರಲ್ಲೇ ಮುಂದುವರೆಯಲಿದೆ ಎಂದು ಆರ್ಬಿಐ ಮಾಹಿತಿ ನೀಡಿದೆ.
ಹೊಸ ಆರ್ಥಿಕ ಯುಗಕ್ಕೆ 2021 ವೇದಿಕೆ ಕಲ್ಪಿಸುತ್ತಿದೆ
ಭಾರತದ ಆರ್ಥಿಕತೆ ಮೇಲೆ ಕೋವಿಡ್ ಬಿಕ್ಕಟ್ಟು ವ್ಯತಿರಿಕ್ತ ಪರಿಣಾಮ ಬೀರಿದ್ದು, ದೇಶದ ಆರ್ಥಿಕ ವ್ಯವಸ್ಥೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆರ್ಬಿಐ ಈ ನಿರ್ಧಾರ ತೆಗೆದುಕೊಂಡಿದೆ. ಅಗತ್ಯವಿರುವವರೆಗೂ ವಿತ್ತೀಯ ನೀತಿಯ ಈ ನಿಲುವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ ಶಕ್ತಿಕಾಂತ ದಾಸ್, ಕಳೆದ ವರ್ಷವು (2020) ನಮ್ಮ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿದರೆ, 2021 ಭಾರತದ ಇತಿಹಾಸದ ಹಾದಿಯಲ್ಲಿ ಹೊಸ ಆರ್ಥಿಕ ಯುಗಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ಹೇಳಿದರು.