ನವದೆಹಲಿ:2 ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಸಂಬಂಧ ನಿಗದಿತ ಸಮಯದೊಳಗೆ ಕ್ರಮ ಕೈಗೊಳ್ಳುವಂತೆ ಸಾಲ ನೀಡಿದ ಬ್ಯಾಂಕ್ಗಳು ಹಾಗೂ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ದೇಶನ ನೀಡಿದೆ.
2020ರ ಮಾರ್ಚ್ 1 ರಿಂದ ಆಗಸ್ಟ್ 31ರ ಅವಧಿಯಲ್ಲಿನ ನಿರ್ದಿಷ್ಟ ಸಾಲದ ಖಾತೆಗಳ ಸರಳ ಬಡ್ಡಿ ಹಾಗೂ ಚಕ್ರಬಡ್ಡಿ ನಡುವಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಆರು ತಿಂಗಳ ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡಬೇಕು. ಈಗಾಗಲೇ ಚಕ್ರಬಡ್ಡಿ ಕಟ್ಟಿದವರಿಗೆ ಹಣ ಮರುಪಾವತಿಸಬೇಕು. ಈ ಸಂಬಂಧ ಯೋಜನೆಯ ನಿಯಮಾವಳಿ-ನಿಬಂಧನೆಗಳನ್ನು ಜಾರಿಗೆ ತರಬೇಕು. ನಿಗದಿತ ಸಮಯದೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಲ ನೀಡಿದ ಬ್ಯಾಂಕ್ಗಳು ಹಾಗೂ ಸಂಸ್ಥೆಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್‌ನ ನಿರ್ದೇಶನದ ಹಿನ್ನೆಲೆ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ತರಲು ಅಕ್ಟೋಬರ್ 24 ರಂದು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕೋವಿಡ್ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಸಾಲಗಾರರಿಗೆ ಪರಿಹಾರವಾಗಿ 2 ಕೋಟಿ ರೂ.ಗಳವರೆಗಿನ ಸಾಲದ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಮಾರ್ಗಸೂಚಿಗಳ ಪ್ರಕಾರ, 2020ರ ಮಾರ್ಚ್ 1 ರಿಂದ ಆಗಸ್ಟ್ 31ರ ಅವಧಿಯಲ್ಲಿ ನಿರ್ದಿಷ್ಟ ಸಾಲದ ಖಾತೆಗಳಲ್ಲಿ ಸಾಲಗಾರರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಅಂದರೆ 2020ರ ಫೆಬ್ರವರಿ 29ರವರೆಗೆ 2 ಕೋಟಿ ರೂ.ವರೆಗೆ ಸಾಲ ಪಡೆದವರ ಆರು ತಿಂಗಳ ಚಕ್ರಬಡ್ಡಿ ಮನ್ನಾ ಆಗಲಿದೆ.
ಸಾಲ ನೀಡಿದ ಸಂಸ್ಥೆಗಳಿಗೆ ಮನ್ನಾ ಆದ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಇದಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿದೆ. ಗೃಹ ಸಾಲ, ಶೈಕ್ಷಣಿಕ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ ಹಣ, ವಾಹನ ಸಾಲ, ಎಂಎಸ್‌ಎಂಇ ಸಾಲ, ಗ್ರಾಹಕರ ದಿನಬಳಕೆಯ ವಸ್ತುಗಳಿಗಾಗಿ ಸಾಲ ಪಡೆದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಚಕ್ರಬಡ್ಡಿ ಅಂದರೆ ಬಡ್ಡಿಯ ಮೇಲಿನ ಬಡ್ಡಿ ಮಾತ್ರ ಮನ್ನಾ ಆಗಲಿದ್ದು, ಸಾಲಗಾರರು ಸರಳ ಬಡ್ಡಿಯನ್ನು ಕಟ್ಟಲೇಬೇಕಿದೆ.