ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಭಾರತೀಯ ರೈಲ್ವೆ 13.68 ಲಕ್ಷ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.
ಸಾಮರ್ಥ್ಯ ಹೆಚ್ಚಿಸುವಿಕೆ ಮತ್ತು ಅಸ್ತಿತ್ವದಲ್ಲಿರುವ ರೈಲು ಜಾಲದ ಆಧುನೀಕರಣದ ಗುರಿಯನ್ನು ಹೊಂದಿರುವ ರೈಲ್ವೆ, ತನ್ನ ಸುಮಾರು 34,642 ಕಿಲೋಮೀಟರ್‌ನ ಹಳಿಗಳನ್ನು ದ್ವಿಗುಣಗೊಳಿಸಲು ತೀರ್ಮಾನಿಸಿದ್ದು, ಶೇ 96 ರಷ್ಟು ಸಂಚಾರವನ್ನ ಹೆಚ್ಚಿಸುವ ಗುರಿ ಹೊಂದಿದೆ.
ರೈಲ್ವೆ ಮೂಲಸೌಕರ್ಯ ವಿಭಾಗಕ್ಕೆ ಬಂಡವಾಳ ಹೂಡಿಕೆ "ಡಿಸೆಂಬರ್ 2021ರೊಳಗೆ ಮೀಸಲಾದ ಸರಕು ಕಾರಿಡಾರ ನಿರ್ಮಾಣ ಹಾಗೂ ಮಾರ್ಚ್ 2023ರ ವೇಳೆಗೆ ರೈಲುಗಳ ವೇಗವನ್ನ 130 ಕಿ.ಮೀ ಕ್ಕೆ ಏರಿಕೆ ಮಾಡುವುದು ಈ ಹೂಡಿಕೆಯ ಭಾಗವಾಗಿದೆ. ಇನ್ನು ಮಾರ್ಚ್ 2024ರ ವೇಳೆಗೆ ವಿದ್ಯುದ್ದೀಕರಣ ಮತ್ತು ಮಾರ್ಚ್ 2025ರ ವೇಳೆಗೆ ಎಲ್ಲ ಮಾರ್ಗಗಳನ್ನು 160 ಕಿ.ಮೀ ವೇಗಕ್ಕೆ ನವೀಕರಿಸುವುದು" ಯೋಜನೆ ಪ್ರಮುಖ ಯೋಜನೆಗಳಾಗಿವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಹೇಳಿದ್ದಾರೆ.
"ಸಂಪನ್ಮೂಲ ಹಂಚಿಕೆಗಾಗಿ ಒಟ್ಟು 58 ಸೂಪರ್ ಕ್ರಿಟಿಕಲ್ ಮತ್ತು 68 ಕ್ರಿಟಿಕಲ್ ಪ್ರಾಜೆಕ್ಟ್‌ಗಳನ್ನು ಗುರುತಿಸಲಾಗಿದೆ. ಸೂಪರ್ ಕ್ರಿಟಿಕಲ್ ಪ್ರಾಜೆಕ್ಟ್‌ಗಳನ್ನು ಡಿಸೆಂಬರ್ 2021ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದು, ಮಾರ್ಚ್ 2024ರ ವೇಳೆಗೆ ಎಲ್ಲ ಪ್ರಾಜೆಕ್ಟ್ಗಳು ಮುಗಿಯಲಿವೆ" ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.
ಸಾಮರ್ಥ್ಯ ಹೆಚ್ಚಿಸುವ ವಿಷಯದಲ್ಲಿ, ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ತನ್ನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಏಕೆಂದರೆ ಖಾಸಗಿ ರೈಲುಗಳ ಕಾರ್ಯಾಚರಣೆಗಳು ಸಹ ಪ್ರಾರಂಭವಾಗುತ್ತವೆ ಎಂದು ಯಾದವ್ ಹೇಳಿದ್ದಾರೆ. ಆದರೆ, ಖಾಸಗಿ ಆಪರೇಟರ್‌ನ ಮೊದಲ ಪ್ಯಾಸೆಂಜರ್ ರೈಲನ್ನು 2023ರಿಂದ 2024ರವರೆಗೆ ಒಂದು ವರ್ಷದೊಳಗೆ ಪರಿಚಯಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ ಎಂದು ಅವರು ಇದೇ ವೇಳೆ ತಿಳಿಸಿದರು.