ನವದೆಹಲಿ:ದೇಶದ ಖಾಸಗಿ ವಲಯವು ಬೆಳವಣಿಗೆಯನ್ನು ಹೆಚ್ಚಿಸಬೇಕಿದೆ ಮತ್ತು ಸಾರ್ವಜನಿಕ ಉದ್ಯಮಗಳು ಮೊದಲಿನಂತೆ ಇಲ್ಲವೆಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ಮರ್ಚೆಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ಖಾಸಗಿ ವಲಯವು ಸರ್ಕಾರದೊಂದಿಗೆ ವಿಶ್ವಾಸ ಬೆಳೆಸುವ ಅವಶ್ಯಕತೆಯಿದೆ. ಇದು ಈ ಸಮಯದಲ್ಲಿ ಅಗತ್ಯವಾಗಿದೆ. ದೇಶದ ಖಾಸಗಿ ವಲಯವು ಬೆಳವಣಿಗೆಯ ಪ್ರಮುಖ ಚಾಲಕನಾಗಿರಬೇಕು. ಈ ಮೊದಲು ಸಾರ್ವಜನಿಕ ವಲಯವು ಬೆಳವಣಿಗೆಯ ಎಂಜಿನ್ ಆಗಿತ್ತು. ಆದರೆ ಈಗ ಅದಿಲ್ಲ ಎಂದರು.
ಬಡತನವನ್ನು ತಗ್ಗಿಸುವುದು, ಆರೋಗ್ಯ ವ್ಯವಸ್ಥೆ ಸುಧಾರಿಸುವುದು ಮತ್ತು ಶಿಕ್ಷಣದ ವ್ಯಾಪ್ತಿಯನ್ನು ಹೆಚ್ಚಿಸುವುದು ಮುಂತಾದ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಬೆಳವಣಿಗೆಯ ದರವನ್ನು ಕನಿಷ್ಠ ಶೇಕಡ ಎಂಟಕ್ಕೆ ಹೆಚ್ಚಿಸುವ ಅಗತ್ಯವಿದೆ. ಬೆಳವಣಿಗೆಯ ಪ್ರಕ್ರಿಯೆಯು ಸಮನಾಗಿರಬೇಕು ಮತ್ತು ಸುಸ್ಥಿರವಾಗಿರಬೇಕು. 1990ರಲ್ಲಿ ಚೀನಾದ ತಲಾ ಆದಾಯವು ಭಾರತದ ಆದಾಯದಂತೆಯೇ ಇತ್ತು ಎಂದು ಹೇಳಿದರು.
ಈಗ, ಚೀನಾದ ತಲಾ ಆದಾಯವು ಭಾರತಕ್ಕಿಂತ ಐದು ಪಟ್ಟು ಹೆಚ್ಚಾಗಿದೆ. ಹೆಚ್ಚಿನ ಬೆಳವಣಿಗೆಯ ದರ ಕಾಣಲು, ಜಿಡಿಪಿಯ ಶೇಕಡಾವಾರು ಹೂಡಿಕೆಗಳನ್ನು ಹೆಚ್ಚಿಸಬೇಕಾಗಿದೆ. ಜಾಗತಿಕ ರಫ್ತುಗಳಲ್ಲಿ ಭಾರತವು ಹೆಚ್ಚಿನ ಪಾಲು ಪಡೆಯಬೇಕಾಗಿದೆ. ಜಾಗತಿಕ ರಫ್ತುಗಳಲ್ಲಿ ಪಾಲನ್ನು ಹೆಚ್ಚಿಸಲು, ಅಗತ್ಯವಿದ್ದರೆ ವಿನಿಮಯ ದರ ನೀತಿಗಳನ್ನು ಬದಲಾಯಿಸಬೇಕು ಎಂದು ಸಲಹೆಗಳನ್ನು ನೀಡಿದರು.