ಮುಂಬೈ:ಇಂಡಿಯಾ ಇಂಕ್ಗೆ ಕೋವಿಡ್ -19ನ ಮೂರನೇ ಅಲೆಯ ಕುರಿತು ಎಚ್ಚರಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಈಗಲೇ ನೀವು ಆ ಅಲೆ ಎದುರಿಸಲು ಮತ್ತು ರಾಜ್ಯದ ಕೈಗಾರಿಕೆ ಹಾಗೂ ಆರ್ಥಿಕತೆಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಮುಂಜಾಗ್ರತೆಯ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಸ್ತುತ ಮತ್ತು ಮುಂಬರುವ ಬಿಕ್ಕಟ್ಟುಗಳನ್ನು ಎದುರಿಸಲು ಕಾರ್ಪೊರೇಟ್ ಹೌಸ್ ಮತ್ತು ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರ್ಕಾರದೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ ಠಾಕ್ರೆ, ಇಂಡಿಯಾ ಇಂಕ್, ತಮ್ಮ ಪ್ಲಾಂಟ್ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕೋವಿಡ್ ಆರೈಕೆ ಸೌಲಭ್ಯಗಳನ್ನು ಸ್ಥಾಪಿಸುವ ಮೂಲಕ ತಕ್ಷಣವೇ ಕೊಡುಗೆ ನೀಡಬಹುದು. ಭವಿಷ್ಯಕ್ಕಾಗಿ 'ಕೋವಿಡ್ - ಹೊಂದಾಣಿಕೆಯ ಕೆಲಸದ ಸ್ಥಳಗಳನ್ನು' ಯೋಜಿಸುತ್ತದೆ ಎಂದರು.
ಪ್ರಸ್ತುತ, ರಾಜ್ಯಕ್ಕೆ ಆಮ್ಲಜನಕದ ಅವಶ್ಯಕತೆಯಿದೆ. ಈಗ ಸಂಪೂರ್ಣ ಉತ್ಪಾದನೆ ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ನಿತ್ಯ ಬರುವ ಹೊಸ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ (ನಿತ್ಯ ಸುಮಾರು 60,000) ನಮಗೆ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ. ಇದಕ್ಕಾಗಿ ಕೈಗಾರಿಕೆಗಳು ನಮಗೆ ಸಹಾಯ ಮಾಡಿ ಎಂದು ಠಾಕ್ರೆ ಪ್ರಮುಖ ವ್ಯಾಪಾರ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಗ್ರೂಪ್ಗಳ ಸಂವಾದದಲ್ಲಿ ಹೇಳಿದರು.
ಆರೋಗ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಮಾತನಾಡಿ, ರಾಜ್ಯವು ಪ್ರತಿ ಮಿಲಿಯನ್ ಜನಸಂಖ್ಯೆಗೆ 3 ಲಕ್ಷ ಪರೀಕ್ಷೆಗಳನ್ನು ನಡೆಸುತ್ತಿದೆ. ಸಾವಿನ ಪ್ರಮಾಣ ಕಡಿಮೆ ಇದ್ದರೂ, ಸೋಂಕುಗಳು ತುಂಬಾ ಹೆಚ್ಚಿದೆ. ಹೊಸ ತಂತ್ರಜ್ಞಾನಗಳ ಆಧಾರದ ಮೇಲೆ ನೈಸರ್ಗಿಕ ಆಮ್ಲಜನಕ ಹೀರಿಕೊಳ್ಳಲು ಮತ್ತು ವೈದ್ಯಕೀಯ ಉತ್ಪಾದನೆಗೆ ಸಂಪೂರ್ಣ ಉತ್ಪಾದನೆ ಒದಗಿಸಲು ಕೈಗಾರಿಕೆಗಳು ತಮ್ಮ ಆವರಣದಲ್ಲಿ ಸಣ್ಣ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಪ್ರಾರಂಭಿಸುವಂತೆ ಮನವಿ ಮಾಡಿದರು.
ಟಾಟಾ, ರಿಲಯನ್ಸ್, ಎಲ್ & ಟಿ, ಇನ್ಫೋಸಿಸ್, ಜೆಎಸ್ಡಬ್ಲ್ಯ, ಮಹೀಂದ್ರಾ & ಮಹೀಂದ್ರಾ, ಗೋದ್ರೇಜ್, ಬ್ಲೂ ಸ್ಟಾರ್, ಕೈನೆಟಿಕ್ ಇಂಜಿನಿಯರಿಂಗ್ ಮತ್ತು ಅನೇಕ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿ ಹಾಗೂ ಅಧಿಕಾರಿಗಳು ಇದ್ದರು