ನವದೆಹಲಿ:ತನ್ನ ಗಡಿಪಾರಿಗೆ ಆದೇಶ ಮರುಪರಿಶೀಲನೆ ನಡೆಸುವಂತೆ ಮದ್ಯದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಲಂಡನ್ ನ್ಯಾಯಾಲಯ ಹಸಿರು ನಿಶಾನೆ ತೋರಿದ ಖುಷಿಯಲ್ಲೇ ಮಲ್ಯ, ಬ್ಯಾಂಕ್ ಮತ್ತು ಕಿಂಗ್ಫಿಶರ್ನ ಉದ್ಯೋಗಿಗಳಿಗೆ ಆಫರ್ ಒಂದನ್ನು ನೀಡಿದ್ದಾರೆ.
'ನ್ಯಾಯಾಲಯ ನನ್ನ ಪಾಲಿಗೆ ಒಳ್ಳೆಯ ಫಲಿತಾಂಶವನ್ನು ಪ್ರಕಟಿಸಿದೆ. ಮತ್ತೊಮ್ಮೆ ನನ್ನ ಆಹ್ವಾನ ನೀಡುತ್ತಿದ್ದೇನೆ. ಕಿಂಗ್ಫಿಶರ್ ಏರ್ಲೈನ್ಸ್ಗೆ ಸಾಲ ನೀಡಿದ್ದ ಒಟ್ಟು ಹಣವನ್ನು ಬ್ಯಾಂಕ್ಗಳಿಗೆ ಮರುಪಾವತಿಸುತ್ತೇನೆ. ನಾನು ಉದ್ಯೋಗಿಗಳಿಗೂ ವೇತನ ನೀಡುತ್ತೇನೆ ಹಾಗೂ ಇತರ ಸಾಲದಾರರಿಗೆ ಅವರ ಹಣ ಹಿಂದಿರುಗಿಸುತ್ತೇನೆ' ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡು ಭರವಸೆ ನೀಡಿದ್ದಾರೆ.
ವಿಜಯ್ ಮಲ್ಯ ಅವರು ಎರಡನೇ ಬಾರಿಗೆ ಸಾಲ ಮರುಪಾವತಿಸುವುದಾಗಿ ಬ್ಯಾಂಕ್ಗಳಿಗೆ ಆಶ್ವಾಸನೆ ನೀಡಿದ್ದಾರೆ. ಆದರೆ, ಮಲ್ಯ ಅವರ ಮಾತುಗಳನ್ನು ಯಾವುದೇ ಬ್ಯಾಂಕ್ಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಭಾರತದ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿ ದೇಶ ಬಿಟ್ಟು ಲಂಡನ್ಗೆ ಪರಾರಿ ಆಗಿದ್ದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂಬ ಭಾರತದ ಮನವಿಗೆ ಸ್ಪಂದಿಸಿದ್ದ ಬ್ರಿಟನ್ ಸರ್ಕಾರದ ಗೃಹ ಸಚಿವಾಲಯ, ಮಲ್ಯ ಗಡಿಪಾರಿಗೆ ಆದೇಶ ನೀಡಿತ್ತು. ಗಡಿಪಾರು ಆದೇಶಕ್ಕೆ ಸಚಿವಾಲಯದ ಸಜ್ಜಿದ್ ಜಾವೇದ್ ಸಹಿ ಮಾಡಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಗಡಿಪಾರು ಸಂಬಂಧ ವಿಚಾರಣೆ ನಡೆಸಿದ್ದ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ವಿಜಯ್ ಮಲ್ಯ ಸಾಲ ತೀರಿಸದೇ ದೇಶ ಬಿಟ್ಟು ಬಂದಿರುವುದಕ್ಕೆ ಸಾಕ್ಷ್ಯಾಧಾರಗಳಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಡಿಸೆಂಬರ್ನಲ್ಲಿ ಆದೇಶ ನೀಡಿತ್ತು. ಆದರೆ, ಈ ಗಡಿಪಾರು ಆದೇಶದ ವಿರುದ್ಧ ಮಲ್ಯ ಲಂಡನ್ ಹೈಕೋರ್ಟ್ನ ದ್ವಿಸದಸ್ಯ ಪೀಠದ ಮುಂದೆ ಏಪ್ರಿಲ್ನಲ್ಲಿ ಅರ್ಜಿ ಸಲ್ಲಿಸಿದ್ದರು.