ಬೆಂಗಳೂರು :ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ರಾತ್ರಿಯಿಂದ ಆರಂಭವಾಗಲಿರುವ ಒಂದು ವಾರದ ಲಾಕ್‌ಡೌನ್‌ಗೂ ಮುನ್ನ 30,000 ಜನರು ನಗರವನ್ನು ತೊರೆದಿದ್ದಾರೆ. ಕಿರಾಣಿ ಅಂಗಡಿ ಮತ್ತು ಮದ್ಯದಂಗಡಿಗಳು ಬಂದ್ ಆಗುವ ಹಿನ್ನೆಲೆಯಲ್ಲಿ ಗ್ರಾಹಕರು ಮುಗಿಬಿದ್ದು ಖರೀದಿ ಭರಾಟೆಯಲ್ಲಿ ತೊಡಗಿದರು.
ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ರಾಜ್ಯದ ಇತರ ಭಾಗಗಳ ವಲಸಿಗ ಕಾರ್ಮಿಕರು ಲಾಕ್‌ಡೌನ್‌ಗೂ ಮುನ್ನ ನಗರದಿಂದ ತಂಡೋಪ ತಂಡವಾಗಿ ಊರುಗಳತ್ತ ತೆರಳಿದ್ದಾರೆ. ಈ ಹಿಂದಿನ ಲಾಕ್ಡೌನ್ ಅವಧಿಯಲ್ಲಿ ಎದುರಿಸಿದ್ದ ಸವಾಲುಗಳು ಮತ್ತೆ ಮರಳಬಹುದೆಂಬ ಭಯದಿಂದ ಸಿಟಿಯಿಂದ ಹಿಮ್ಮುಖವಾಗಿದ್ದಾರೆ ಎಂದರು.
ನಿನ್ನೆ 35,000 ಪ್ರಯಾಣಿಕರು ಬೆಂಗಳೂರಿನಿಂದ ಹೊರ ಹೋಗಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಸ್‌ಗಳಲ್ಲಿ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡುತ್ತಿದ್ದೇವೆ. ಆದರೂ ಈ ಸಂಖ್ಯೆ ದೊಡ್ಡದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ರಾಜ್ಯ ಅಬಕಾರಿ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಸೋಮವಾರ ಒಂದೇ ದಿನ 230 ಕೋಟಿ ರೂ. ಮೌಲ್ಯದಷ್ಟು ಮದ್ಯ ಮಾರಾಟವಾಗಿದೆ. ನಿನ್ನೆ ವಿಪರೀತ ಎನ್ನುವಷ್ಟು ಮದ್ಯ ಪ್ರಿಯರು ಲಿಕ್ಕರ್ ಮಳಿಗೆಗಳ ಮುಂದೆ ಸಾಲುಗಟ್ಟಿದ್ದರು. ಇಂಡಿಯಾ ಮೇಡ್ ವಿದೇಶಿ ಮದ್ಯ 215.55 ಕೋಟಿ ಮತ್ತು 14.83 ಕೋಟಿ ಮೌಲ್ಯದ ಬಿಯರ್ ಮಾರಾಟ ಮಾಡಲಾಗಿದೆ ಎಂದರು.
ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಅಪಾಯ ಗಮನದಲ್ಲಿಟ್ಟುಕೊಂಡು, ಮಂಗಳವಾರ ರಾತ್ರಿ 8ರಿಂದ ಜುಲೈ 22ರ ಬೆಳಗ್ಗೆ 5ಗಂಟೆಯವರೆಗೆ ಲಾಕ್ಡೌನ್ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.