ಬ್ಯಾಂಗಾಕ್: ತೈಲ ರಫ್ತು ರಾಷ್ಟ್ರಗಳ ತೈಲ ದರ ಸಮರದಿಂದಾಗಿ ಇಂಧನ ಮಾರುಕಟ್ಟೆ ಬೆಚ್ಚಿಬಿದ್ದಿದೆ. ಇದೀಗ ಇರಾನ್ ಬೆಂಬಲಿತ ಬಂಡುಕೋರರು ತೈಲ ಉತ್ಪಾದನಾ ವಲಯದ ಮೇಲೆ ದಾಳಿ ನಡೆಸಿದ್ದು, ಮತ್ತೆ ತೈಲ ದರದಲ್ಲಿ ಏರಿಕೆ ಕಂಡಿದೆ. ಜೊತೆಗೆ ಉತ್ಪಾದನೆಯಲ್ಲಿ ಕೊರತೆ ಭೀತಿ ಎದುರಾಗಿದೆ. ವಿಶ್ವದ ಅತಿ ದೊಡ್ಡ ತೈಲ ರಫ್ತುದಾರನಾದ ಸೌದಿ ಅರೇಬಿಯಾದಲ್ಲಿ ತೈಲ ಉತ್ಪಾದಕರ ಹಲವು ನಿರ್ಬಂಧ ಸಹ ಸೋಮವಾರ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಒಂದು ಬ್ಯಾರಲ್ ಕಚ್ಚಾ ತೈಲ ದರ 70 ಡಾಲರ್ಗೆ ತಲುಪಿದೆ. ಒಂದೇ ದಿನ 2 ಡಾಲರ್ ಏರಿಕೆ ಕಂಡಿದ್ದು, 70.47 ಡಾಲರ್ಗೆ ತಲುಪಿದೆ. ಕೊರೊನಾ ಕಾಲದಲ್ಲಿ ತೈಲ ಕಂಪನಿಗಳು ತೈಲ ಬೆಲೆಯ ಕುಸಿತ ಎದುರಿಸಿದ್ದವು. ಆದರೆ ಇದೀಗ ತೈಲ ಬೆಲೆ ಮತ್ತೆ ಏರಿಕೆಯಾಗುತ್ತಿದೆ.
ಕಳೆದ ತಿಂಗಳಲ್ಲಿ ಅಮೆರಿಕಾದಲ್ಲಿ ಸುಮಾರು 4 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆಯೂ ತೀವ್ರ ಚಳಿಯ ಕಾರಣದಿಂದಾಗಿ ಕುಸಿತಕಂಡಿದ್ದು, ಪ್ರತಿ ಬ್ಯಾರೆಲ್ ಕಚ್ಚಾ ತೈಲ ಬೆಲೆ 60ಕ್ಕಿಂತ ಹೆಚ್ಚಾಗಿತ್ತು. ಆದರೆ ಕಳೆದ ವಾರ ಒಪೆಕ್ ರಾಷ್ಟ್ರಗಳು ತೈಲ ರಫ್ತು ಹೆಚ್ಚಿಸುವ ನಿರೀಕ್ಷೆ ಇದ್ದರೂ, ಉತ್ಪಾದನೆ ಹಾಗೂ ರಫ್ತಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಅಲ್ಲದೆ ಒಪೆಕ್ ರಾಷ್ಟ್ರಗಳು ತೈಲ ರಫ್ತಿನ ಮೇಲಿನ ನಿರ್ಬಂಧಗಳಿಗೆ ಬದ್ಧವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಸಾಧಿಸಲು ಮುಂದಾಗಿವೆ.