ನವದೆಹಲಿ: ಭಾರತೀಯರು ಹಿಂದಿನಿಂದಲೂ ಮನೆಮದ್ದಾಗಿ ಬಳಸುತ್ತಾ ಬರುತ್ತಿರುವ ಸರ್ವಗುಣ ಸಂಪನ್ನ ಅರಿಶಿನಕ್ಕೆ ಅಮೆರಿಕ ಮನಸೋತಿದೆ. ಸೂಕ್ಷ್ಮಾಣು ನಿರೋಧ (ಆಂಟಿಮೈಕ್ರೊಬಿಯಲ್ ಅಥವಾ ನಂಜುನಿರೋಧಕ) ಅಂಶ ಹೊಂದಿರುವ ಅರಿಶಿನ ಉತ್ಪಾದನೆಯಲ್ಲಿ ಭಾರತ ಅತಿದೊಡ್ಡ ರಾಷ್ಟ್ರವಾಗಿದೆ.
ಮೇಘಾಲಯದಲ್ಲಿ ಬೆಳೆಯುವ ವಿಶೇಷ ಅರಿಶಿನ ಪ್ರಭೇದವಾದ ಅರಿಶಿನ 'ಲಕಡಾಂಗ್'ನಿಂದ ನ್ಯೂಟ್ರಾಸ್ಯುಟಿಕಲ್ಸ್ (ಪೋಷಣಖಾದ್ಯ) ತಯಾರಿಸಲು ಅಮೆರಿಕ ಸಂಸ್ಥೆಯೊಂದು ರೈತ ಉತ್ಪಾದಕ ಸಂಸ್ಥೆಗಳೊಂದಿಗೆ (ಎಫ್‌ಪಿಒ) ಒಪ್ಪಂದ ಮಾಡಿಕೊಂಟಡಿದೆ.
ಈ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ.ಸಂಗ್ಮಾ ಅವರು ಗುರುವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಮೆರಿಕದಲ್ಲಿ ಪ್ರಸಿದ್ಧ 'ಲಕಡಾಂಗ್' ಅರಿಶಿನ ಬಿಡುಗಡೆ ಮಾಡಿದರು.
ತೋಮರ್ ಅವರು ಮೇಘಾಲಯದ ರೈತರನ್ನು ಶ್ಲಾಘಿಸಿದರು. ದೇಶದ ಅನ್ನದಾತ ಪ್ರಗತಿಗೆ ಕೇಂದ್ರವು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಿದೆ ಎಂದು ಭರವಸೆ ನೀಡಿದರು.
ಓದಿ: ಜಾಗತಿಕ ಸ್ಪರ್ಧಾತ್ಮಕತೆ ವರದಿ-2020: ಚೇತರಿಕೆಯ ಹಾದಿಯಲ್ಲಿ ದೇಶಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ?
ಗ್ರಾಮೀಣಾಭಿವೃದ್ಧಿಯ ಬಗೆಗಿನ ಬದ್ಧತೆಗೆ ಮುಖ್ಯಮಂತ್ರಿಯನ್ನು ಶ್ಲಾಘಿಸಿದ ಕೇಂದ್ರ ಸಚಿವರು, ಇಂದು, ತಮ್ಮದೇ ರಾಜ್ಯದ ಅರಿಶಿನದ ಖ್ಯಾತಿಯು ವಿಶ್ವಾದ್ಯಂತ ತಲುಪಿದೆ. ಇಂತಹ ಹೆಚ್ಚಿನ ಪ್ರಯತ್ನಗಳು ನಡೆಯಬೇಕಿದೆ. ಸಣ್ಣ ಮತ್ತು ಬಡವರಿಗೆ ರಾಜ್ಯದಲ್ಲಿ ಹೊಸ ಎಫ್‌ಪಿಒಗಳನ್ನು ಸಹ ರಚಿಸಬೇಕು. ಈ ಕ್ರಮಗಳು ರೈತರಿಗೆ ಲಾಭದಾಯಕವಾಗಲಿವೆ ಎಂದರು.
ಭಾರತವು ವಿಶ್ವದ ಅತಿದೊಡ್ಡ ಅರಿಶಿನ ಉತ್ಪಾದಕವಾಗಿದ್ದು, ಇದು ಜಾಗತಿಕ ಉತ್ಪಾದನೆಗೆ ಶೇ 80ಕ್ಕಿಂತ ಅಧಿಕ ಕೊಡುಗೆ ನೀಡುತ್ತದೆ. 2019-20ರ ಅಂದಾಜಿನ ಪ್ರಕಾರ, ಭಾರತವು ಅಂದಾಜು 2.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 9.40 ಲಕ್ಷ ಟನ್ ಅರಿಶಿನ ಉತ್ಪಾದಿಸಿದೆ.
ವಿಶ್ವದ ಅತಿದೊಡ್ಡ ಅರಿಶಿನ ರಫ್ತುದಾರ ಭಾರತವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೆಲೆಪಡೆಯುತ್ತದೆ. ಭಾರತದಲ್ಲಿ ಉತ್ಪತ್ತಿಯಾಗುವ ಅರಿಶಿನದ ಶೇ 16 ರಿಂದ 17ರಷ್ಟು ಅರಿಶಿನ ಪುಡಿ, ಕರ್ಕ್ಯುಮಿನ್ ಪೌಡರ್, ಎಣ್ಣೆ ಮತ್ತು ಒಲಿಯೊರೆಸಿನ್ ಸೇರಿದಂತೆ ರಫ್ತು ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಿಂದ ಅರಿಶಿನ ರಫ್ತು ಗಣನೀಯವಾಗಿ ಹೆಚ್ಚಾಗಿದೆ.