ನವದೆಹಲಿ:ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಫಲಾನುಭವಿಗಳು ಆಧಾರ್ ಸಂಖ್ಯೆ ಜೋಡಿಸುವ ಅವಧಿಯನ್ನು ಕೇಂದ್ರ ಮುಂದೂಡಿದೆ.
ಬುಧವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಸಂಖ್ಯೆ ಜೋಡಿಸುವ ಕಾಲ ಮಿತಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ 8,000 ಕೋಟಿ ರೂ. ಪಡೆಯಲು ನೆರವಾಗಲಿದೆ.
ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವೆಂದು ಆದೇಶ ಹೊರಡಿಸಿದ ಬಳಿಕ ಆಗಸ್ಟ್ 1ರಿಂದ ಇದುವರೆಗೂ 9,000 ಕೋಟಿ ರೂ.ಯನ್ನು ರೈತರು ಸ್ವೀಕರಿಸಿದ್ದಾರೆ. ಪ್ರಥಮ, ದ್ವೀತಿಯ ಹಾಗೂ ತೃತಿಯ ಹಂತದ ಹಣ ವರ್ಗಾವಣೆಯಲ್ಲಿ ಕ್ರಮವಾಗಿ ₹ 6.77 ಕೋಟಿ, ₹ 5.14 ಕೋಟಿ ಹಾಗೂ 1.74 ಕೋಟಿ ಸೇರಿ ಒಟ್ಟು 27,306 ಕೋಟಿ ರೂ. ಸಂದಾಯವಾಗಿದೆ.
ಆಧಾರ್ ಕಡ್ಡಾಯ ಪರಿಶೀಲನೆಯಿಂದಾಗಿ ಪಿಎಂ- ಕಿಸಾನ್ ಲಾಭದ ವರ್ಗಾವಣೆ ನಿಧಾನವಾಗಿತ್ತು. ಜೋಡಣೆಯನ್ನು ಸಡಿಲಿಸುವ ನಿರ್ಧಾರದಿಂದ ವರ್ಗಾವಣೆ ಪ್ರಕ್ರಿಯೆ ವೇಗವಾಗಲಿದೆ. ದೀಪಾವಳಿಗೆ (ಅಕ್ಟೋಬರ್ 27) ಮೊದಲು ಎಲ್ಲ ಅರ್ಹ ರೈತರು ಯೋಜನೆಯ ಲಾಭ ಪಡೆಯಲು ಸಹಾಯಕವಾಗಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.