ನವದೆಹಲಿ: ವಿತ್ತೀಯ ಕೊರತೆ ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹೊರಹಾಕಿದ್ದಾರೆ.
ಮುಂದಿನ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಆಸ್ತಿ ಮಾರಾಟ ಮಾಡಲು ಯೋಜನೆ ರೂಪಿಸಿದೆ ಎಂದಿರುವ ಅವರು, ಆಸ್ತಿಯ ಮಾಲೀಕತ್ವ ಕೇಂದ್ರ ಸರ್ಕಾರದ ಬಳಿಯೇ ಉಳಿದುಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಬಿಡ್ಡಿಂಗ್ ನಡೆಸುವ ಮೂಲಕ ಆಸ್ತಿ ಮಾರಾಟ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, 2022- 2025ರ ಅವಧಿಯಲ್ಲಿ ಆಪರೇಟ್ ಮೆಂಟೇನ್ ಅಂಡ್ ಟ್ರಾನ್ಸ್ಫರ್ ಸ್ಕೀಮ್ ಯೋಜನೆ ಮೂಲಕ ಆಸ್ತಿಗಳ ಮಾರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೋಸ್ಕರ ನ್ಯಾಷನಲ್ ಮಾನಿಟೈಸೇಷನ್ ಪೈಪ್‌ಲೈನ್ ಪ್ಲ್ಯಾನ್ ಜಾರಿಗೊಳಿಸಲಾಗಿದ್ದು, ಗ್ಯಾಸ್ ಪೈಪ್‌ಲೈನ್‌ಗಳು, ರಸ್ತೆಗಳು, ರೈಲ್ವೆ ಸ್ವತ್ತುಗಳು ಮತ್ತು ಗೋದಾಮಿನ ಸೌಲಭ್ಯ ಸೇರಿದಂತೆ ಇತರ ಆಸ್ತಿಗಳ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಮಿತಾಬ್ ಕಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ನ್ಯಾಷನಲ್ ಮಾನಿಟೈಸೇಷನ್ ಪೈಪ್‌ಲೈನ್ ಪ್ಲ್ಯಾನ್ನಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ವಲಯಗಳು ಭಾಗಿಯಾಗಬಹುದಾಗಿದ್ದು, ಆಸ್ತಿ ಖರೀದಿ ಮಾಡಿದ ಹಣ ಹೊಸ ಯೋಜನೆಗೆ ಹೂಡಿಕೆ ಮಾಡಲಾಗುವುದು.
ಪ್ರಮುಖವಾಗಿ ಕೇಂದ್ರದ 11 ಇಲಾಖೆಯ ಮೂಲಸೌಕರ್ಯ ಯೋಜನೆ ಮಾರಾಟಕ್ಕೆ ಕೇಂದ್ರ ನಿರ್ಧಾರ ಮಾಡಿದ್ದು, ಇದರಲ್ಲಿ ರಸ್ತೆಗಳು, ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ವಿದ್ಯುತ್, ಪೈಪ್‌ಲೈನ್ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರ ಸೇರಿಕೊಂಡಿವೆ.
ಪ್ರಮುಖವಾಗಿ 1.6 ಲಕ್ಷ ಕೋಟಿ ರಸ್ತೆ, 1.5 ಲಕ್ಷ ರೂ. ರೈಲ್ವೆ, 79,000 ಕೋಟಿ ವಿದ್ಯುತ್, 20,800 ಕೋಟಿ ಏರ್ಪೋರ್ಟ್,13,000 ಬಂದರು, 35,000 ಕೋಟಿ ಟೆಲಿಕಾಂ, 11,500 ಕೋಟಿ ಮೈದಾನಗಳು ಹಾಗೂ 45,200 ಕೋಟಿ ಗಣಿಗಾರಿಕೆಯಿಂದ ಸಂಗ್ರಹ ಮಾಡಲು ಮುಂದಾಗಿದೆ.