ವಾಷಿಂಗ್ಟನ್(ಅಮೆರಿಕ):ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅನೇಕ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿವೆ. ಈ ನಿರ್ಬಂಧದ ಮೂಲಕ ರಷ್ಯಾದಿಂದ ಯಾವುದೇ ಸರಕು ಅಥವಾ ಸೇವೆಯನ್ನು ಆಮದು ಅಥವಾ ರಫ್ತು ಮಾಡಲು ಬೇರೆ ದೇಶಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ರಷ್ಯಾದ ನೈಸರ್ಗಿಕ ಅನಿಲ ಮತ್ತು ತೈಲವನ್ನೇ ಅವಲಂಭಿಸಿದ ರಾಷ್ಟ್ರಗಳು ಇಕ್ಕಟ್ಟಿಗೆ ಸಿಲುಕಿವೆ.
ಇದನ್ನು ನಿಭಾಯಿಸಲು ಯೂರೋಪ್ ಮತ್ತು ಅಮೆರಿಕ ಖಂಡಗಳ ರಾಷ್ಟ್ರಗಳು ತಕ್ಷಣವೇ ಹೆಚ್ಚು ತೈಲ ಮತ್ತು ಅನಿಲ ಉತ್ಪಾದನೆಗೆ ಆದ್ಯತೆ ನೀಡಬೇಕು. ಹೀಗಾದಾಗ ಮಾತ್ರ ರಷ್ಯಾದ ಮೇಲಿನ ನಿರ್ಬಂಧದ ದುಷ್ಪರಿಣಾಮದಿಂಧ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಸಲಹೆ ನೀಡಿದ್ದಾರೆ.
ಈ ರೀತಿಯಾಗಿ ಹೇಳಲು ನಾನು ಇಷ್ಟ ಪಡುವುದಿಲ್ಲ. ಆದರೆ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಎಲಾನ್ ಮಸ್ಕ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಇಂಥಹ ಸಾಧಾರಣವಲ್ಲದ ಸಮಯ ಅಸಾಧಾರಣವಾದುದನ್ನೇ ಬೇಡುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.