ನವದೆಹಲಿ:ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಜೆಟ್ ಏರ್‌ವೇಸ್ ಸಂಸ್ಥೆಗೆ ಸಂಸ್ಥಾಪಕ ಅಧ್ಯಕ್ಷ ನರೇಶ್ ಗೋಯಲ್ ರಾಜೀನಾಮೆ ಸಲ್ಲಿಸಿದ ಮರುದಿನ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ವಿವಿಧ ಅಧಿಕಾರಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ.
ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರು ಸೋಮವಾರ ಸಂಸ್ಥೆಯೊಂದಿಗೆ ಸಭೆ ನಡೆಸಿ ವಿಮಾನಯಾನ ಸಂಸ್ಥೆಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು.
'ಇನ್ನು ಮುಂದೆ ಜೆಟ್ನ ಯಾವುದೇ ವಿಮಾನ ಹಾರಾಟ ಸೇವೆಯಿಂದೆ ಹಿಂದೆ ಸರಿಯುವುದಿಲ್ಲ ಎಂಬ ಭರವಸೆಯನ್ನು ಸಂಸ್ಥೆ ನೀಡಿದೆ. ಇಂದು 35 ವಿಮಾನಗಳು ಸೇವೆಯಲ್ಲಿದ್ದು, ಮುಂದಿನ ಒಂದು ತಿಂಗಳ ಕಾಲ ಡಿಜಿಸಿಎಯನ್ನು ಅನುಸರಿಸಿ ವೇಳಾ ಪಟ್ಟಿಗೆ ಅನುಮೋದನೆ ನೀಡಲಿದ್ದಾರೆ' ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
25 ವರ್ಷಗಳ ಹಿಂದೆ ಆರಂಭವಾದ ಜೆಟ್ ಏರ್‌ವೇಸ್ ಸಂಸ್ಥೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಬಂಡವಾಳ ಹೆಚ್ಚಿಸಿಕೊಳ್ಳಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಸಂಸ್ಥೆಯು ಏಪ್ರಿಲ್ ಅಂತ್ಯದ ವೇಳೆಗೆ 14 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಪ್ರಕಟಿಸಿತ್ತು. ಇದಲ್ಲದೆ, ಬಾಡಿಗೆ ಮತ್ತು ಗುತ್ತಿಗೆ ಹಣವನ್ನು ಪಾವತಿಸದೆ ನಿಂತಿರುವ 54 ವಿಮಾನಗಳು ಸೇರಿದಂತೆ ಸಂಸ್ಥೆಯ ಒಟ್ಟು 80 ವಿಮಾನಗಳ ಹಾರಾಟ ಸ್ಥಗಿತಗೊಂಡತಾಗಿದೆ. ಸಂಸ್ಥೆಯ ಪುನರುಜ್ಜೀವನಕ್ಕೆ ಅಂದಾಜು 10 ಸಾವಿರ ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.