ಪಣಜಿ: ಕೋವಿಡ್-19 ಪ್ರೇರಿತ ಲಾಕ್‌ಡೌನ್ ನಡುವೆಯೂ ಗೋವಾ ಸರ್ಕಾರವು ಪ್ರವಾಸಿ ಟ್ಯಾಕ್ಸಿಗಳ ಮೇಲಿನ ನಿರ್ಬಂಧ ಸಡಿಲಿಸಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಸ್ಥಗಿತಗೊಂಡಿರುವುದರಿಂದ ವಿನಾಯತಿಯು ಟ್ಯಾಕ್ಸಿ ನಿರ್ವಾಹಕರಿಗೆ ಯಾವುದೇ ಪ್ರತಿಫಲಕೊಟ್ಟಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಗೋವಾ ಪ್ರವಾಸಿ ಟ್ಯಾಕ್ಸಿ ಅಸೋಸಿಯೇಷನ್ ಅಧ್ಯಕ್ಷ ವಾಸುದೇವ್ ಅರ್ಲೆಕರ್, ಪ್ರವಾಸಿ ಟ್ಯಾಕ್ಸಿಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದರೂ ವ್ಯವಹಾರ ಇನ್ನೂ ನೆಲಬಿಟ್ಟು ಮೇಲೇಳುತ್ತಿಲ್ಲ ಎಂದರು.
15 ಲಕ್ಷ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ 16 ಲಕ್ಷಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳಿವೆ. ಪ್ರತಿ ಮನೆಯಲ್ಲೂ ಒಂದು ಕಾರು ಇದೆ. ನಮ್ಮ ವ್ಯವಹಾರವು ಪ್ರವಾಸಿಗರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಪ್ರವಾಸೋದ್ಯಮ ಪುನರಾರಂಭವಾಗುವವರೆಗೆ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಘಟನೆ ಮಾಜಿ ಅಧ್ಯಕ್ಷ ಲಕ್ಷ್ಮಣ್ ಕೊರ್ಗಾಂವ್ಕರ್ ಅವರು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ ಎಂದರು.
ಪ್ರತಿ ಟ್ಯಾಕ್ಸಿ ಆಪರೇಟರ್‌ಗೆ ಮುಂದಿನ ಆರು ತಿಂಗಳವರೆಗೆ ಪರಿಹಾರವಾಗಿ ತಿಂಗಳಿಗೆ 12,000 ರೂ. ಪಾವತಿಸಬೇಕು. ಟ್ಯಾಕ್ಸಿ ನಿರ್ವಾಹಕರು ತಮ್ಮ ಬ್ಯಾಂಕ್ ಕಂತು ಪಾವತಿಸಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರವು ಹಣಕಾಸು ಸಂಸ್ಥೆಗಳ ಜತೆ ಈ ಬಗ್ಗೆ ಮಾತನಾಡಬೇಕು. ವಿಮಾ ನವೀಕರಣಗಳನ್ನು ಮುಂದೂಡಬೇಕು ಮತ್ತು ರಸ್ತೆ ತೆರಿಗೆ ಮನ್ನಾ ಮಾಡಬೇಕು ಎಂಬ ಬೇಡಿಕೆ ಇರಿಸಿದ್ದೇವೆ ಎಂದು ಅರ್ಲೆಕರ್ ತಿಳಿಸಿದರು.