ಬಟ್ಟೆ ತೊಳೆಯಬೇಕಾದರೆ ಸಾಕಷ್ಟು ಪ್ರಮಾಣದ ನೀರು, ಡಿಟರ್ಜೆಂಟ್ ಬೇಕು. ಇದಲ್ಲದೇ ಅಧಿಕ ಪ್ರಮಾಣದ ನೀರೂ ಪೋಲಾಗುತ್ತದೆ. ಇದನ್ನು ತಪ್ಪಿಸಲು ಎಲ್ಜಿ ಸಂಸ್ಥೆ ನೀರಿಲ್ಲದೇ ಬಟ್ಟೆ ತೊಳೆಯುವ ತಂತ್ರಜ್ಞಾನವನ್ನು ತನ್ನ ಹೊಸ ಮಾದರಿಯ ವಾಷಿಂಗ್ ಮಷಿನ್ನಲ್ಲಿ ಅಳವಡಿಸಿಕೊಳ್ಳಲು ಮುಂದಾಗಿದೆ.
ಎಲ್ಜಿ ಸಂಸ್ಥೆಯು ನೀರಿಲ್ಲದೇ ಬಟ್ಟೆ ತೊಳೆಯುವ ಯಂತ್ರದ ಅಭಿವೃದ್ಧಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸರ್ಕಾರ ಈ ತಂತ್ರಜ್ಞಾನದ ಪ್ರಯೋಗವನ್ನು ಅನುಮೋದಿಸಿದ ನಂತರ ದಕ್ಷಿಣ ಕೊರಿಯಾದ ಕಂಪನಿ ಈ ಸಾಹಸಕ್ಕೆ ಮುಂದಾಗಲಿದೆ ಎಂದು ತಿಳಿದು ಬಂದಿದೆ.
ಈ ತಂತ್ರಜ್ಞಾನದಲ್ಲಿ ವಾಷಿಂಗ್ ಮಷಿನ್ನಲ್ಲಿ ಬಟ್ಟೆಗಳನ್ನು ತೊಳೆಯಲು ನೀರಿನ ಬದಲಿಗೆ ಇಂಗಾಲದ ಡೈಆಕ್ಸೈಡ್ ಬಳಸಿ, ಅದನ್ನೇ ನೀರಿನ ರೀತಿ ಬಳಕೆ ಮಾಡಿಕೊಳ್ಳುವುದಾಗಿದೆ. ನೈಸರ್ಗಿಕ ಅನಿಲ ರೂಪವಾದ ಇಂಗಾಲದ ಡೈಆಕ್ಸೈಡ್ ಅನ್ನು ಶೈತ್ಯೀಕರಣ ಪ್ರಕ್ರಿಯೆಯ ಮೂಲಕ ದ್ರವವನ್ನಾಗಿ ಪರಿವರ್ತಿಸಿ, ವಾಷಿಂಗ್ ಮಷಿನ್ ನೀರಿಲ್ಲದೆ ಕೊಳಕು ಬಟ್ಟೆಗಳನ್ನು ತೊಳೆಯುತ್ತದೆ.