ಬೆಂಗಳೂರು:ಕಳೆದ ಬಾರಿಯ ಲಾಕ್ಡೌನ್ನ ಆರ್ಥಿಕ ಸಂಕಷ್ಟದಿಂದ ಅನುದಾನ ಇಲ್ಲದೆ ರಾಜ್ಯದ ರಸ್ತೆ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಲಾಕ್‌ಡೌನ್ ವಾಪಸಾಗಿದ್ದು, ಅನುದಾನ ಕೊರತೆಯಿಂದ ಈಗಾಗಲೇ ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿಗೆ ಮತ್ತೆ ಗ್ರಹಣ ಎದುರಾಗಲಿದೆ.
ಕಳೆದ ಬಾರಿ ಹೇರಲಾದ ಲಾಕ್ಡೌನ್ಗೆ ರಾಜ್ಯದ ಬೊಕ್ಕಸ ಖಾಲಿಯಾಗಿತ್ತು. ಇದರಿಂದ ಸರ್ಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ನೀಡಲು ಸಾಧ್ಯವಾಗಿಲ್ಲ. ಅದರಲ್ಲೂ ರಾಜ್ಯದ ರಸ್ತೆ ಕಾಮಗಾರಿಗೆ ತೀವ್ರ ಹೊಡೆತ ಬಿದ್ದಿತ್ತು. ಅನುದಾನ ಇಲ್ಲದೆ ಬಹುತೇಕ ರಸ್ತೆ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ರಸ್ತೆ ಕಾಮಗಾರಿಯ ವೇಗಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಕೊರೊನಾರ್ಭಟಕ್ಕೆ ರಾಜ್ಯದಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಮತ್ತೆ ರಾಜ್ಯ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಹೀಗಾಗಿ ಮತ್ತೆ ರಾಜ್ಯದ ರಸ್ತೆ ಕಾಮಗಾರಿಗೆ ಬ್ರೇಕ್ ಬೀಳಲಿದೆ.
ರಸ್ತೆ ಕಾಮಗಾರಿಗಳ ಪ್ರಗತಿಗೆ ಹಿನ್ನಡೆ:
ಈ ಬಾರಿ ಲಾಕ್‌ಡೌನ್ ನಿಂದ ಉಂಟಾಗಲಿರುವ ಆರ್ಥಿಕ ಸಂಕಷ್ಟಕ್ಕೆ ಮತ್ತೆ ರಾಜ್ಯ ರಸ್ತೆ ಕಾಮಗಾರಿಗಳ ವೇಗಕ್ಕೆ ಅಂಕುಶ ಬೀಳಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿ ಲೋಕೋಪಯೋಗಿ ಇಲಾಖೆಗೆ 10,256 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಲಾಕ್‌ಡೌನ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಮತ್ತು ಕೋವಿಡ್ ನಿರ್ವಹಣೆ ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಅಗಾಧ ವೆಚ್ಚ ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಈ ವರ್ಷನೂ ಬಜೆಟ್ ಅನುದಾನ ಕೈಗೆ ಸಿಗುವುದು ಬಹುತೇಕ ಕಷ್ಟ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅನುದಾನದ ತೀವ್ರ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಯ ಬಾಕಿ ಬಿಲ್ ಮೊತ್ತವೇ ಸುಮಾರು 10 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಅನುದಾನ ಇಲ್ಲದೇ ಗುತ್ತಿಗೆದಾರರ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಮತ್ತೆ ಅನುದಾನ ಕಡಿತ ಬಹುತೇಕ ಖಚಿತವಾಗಿದ್ದು, ರಸ್ತೆ ಕಾಮಗಾರಿಗಳ ವೇಗಕ್ಕೆ ಬ್ರೇಕ್ ಬೀಳಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಅದರ ಜೊತೆಗೆ ಲಾಕ್‌ಡೌನ್ ನಿಂದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದು, ತೀವ್ರ ಕಾರ್ಮಿಕರ ಕೊರತೆಯೂ ಎದುರಾಗಿದೆ. ಹೀಗಾಗಿ ರಸ್ತೆ ಕಾಮಗಾರಿ ವೇಗಕ್ಕೆ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿಯ ರಸ್ತೆ ಕಾಮಗಾರಿ ಪ್ರಗತಿ ಕುಂಠಿತ:
ಕಳೆದ ಬಾರಿ ಲೋಕೋಪಯೋಗಿ ಇಲಾಖೆ ಭಾರಿ ಅನುದಾನ ಕೊರತೆ ಎದುರಿಸಿದ ಕಾರಣ ರಸ್ತೆಗಳ ಅಭಿವೃದ್ಧಿ ಕಾಮಗಾರಿ ತೀವ್ರ ಕುಂಠಿತವಾಗಿತ್ತು. ಇತ್ತ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ ದುರಸ್ತಿಗೆ ಇಲಾಖೆ ಬಳಿ ಹಣ ಇಲ್ಲದಂತಾಗಿತ್ತು. ಕಳೆದ ಬಾರಿ ಅನುದಾನ ತೀವ್ರ ಕೊರತೆ ಹಿನ್ನೆಲೆ ಲೊಕೊಪಯೋಗಿ ಇಲಾಖೆಯ ದಕ್ಷಿಣ ವಲಯ ಮತ್ತು ಸೆಂಟ್ರಲ್ ವಲಯದಲ್ಲಿ ಮಾತ್ರ ಹೊಸ ರಸ್ತೆಗಳ ಕಾಮಗಾರಿ ಮಾಡಲಾಗಿದೆ. ಉಳಿದಂತೆ ಉತ್ತರ ಹಾಗೂ ಈಶಾನ್ಯ ವಲಯಗಳಲ್ಲಿ ಯಾವುದೇ ಹೊಸ ರಸ್ತೆ ಕಾಮಗಾರಿ ಕೈಗೊಳ್ಳಲಾಗಿಲ್ಲ.
ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ 2020-21ರಲ್ಲಿ ಒಟ್ಟು 5160 ಕಿ.ಮೀ ರಾಜ್ಯ ಹೆದ್ದಾರಿ ಹಾಗೂ 7769 ಕಿ.ಮೀ ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗೆ ಯಾವುದೇ ಹೊಸ ರಸ್ತೆಗಳು ಸೇರ್ಪಡೆಗೊಂಡಿಲ್ಲ. ಅದೇ ರೀತಿ ರಾಜ್ಯ ಹೆದ್ದಾರಿಗಳಲ್ಲಿ ಕೇವಲ 4 ಹೊಸ ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ಪ್ರಮುಖ ಜಿಲ್ಲಾ ರಸ್ತೆಗಳಲ್ಲಿ 46 ಸೇತುವೆಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ರಾಜ್ಯ ಹೆದ್ದಾರಿಗಳಲ್ಲಿ ಯಾವುದೇ ಹೊಸ ಸೇತುವೆಗಳನ್ನು ನಿರ್ಮಿಸಲು ಆಗಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ರಾಜ್ಯ ಹೆದ್ದಾರಿಯನ್ನು 766ಇ ಹಾಗೂ 766ಇಇ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಬೇಲೇಕೇರಿ ಬಂದಿನವರೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿ ಹಾಗೂ ಕುಂದಾಪುರದಿಂದ- ಕಾರವಾರದ ಮಾಜಾಳಿಯವರೆಗಿನ ರಾಷ್ಟ್ರೀಯ ಹೆದ್ದಾರಿ 17ಅನ್ನು ರಾಷ್ಟ್ರೀಯ ಹೆದ್ದಾರಿ 66ರನ್ನಾಗಿ ಪರಿವರ್ತಿಸಿ ಚತುಷ್ಪಥಗೊಳಿಸಿರುವ ಕಾಮಗಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2020ರ ಡಿಸೆಂಬರ್ 19ರಂದು ಲೋಕಾರ್ಪಣೆಗೊಳಿಸಿದ್ದರು. ಲೋಕೋಪಯೋಗಿ ಇಲಾಖೆ ನೀಡಿದ ಮಾಹಿತಿಯಲ್ಲಿ ಈ ಕಾಮಗಾರಿ ಸೇರ್ಪಡೆ ಆಗದಿರುವುದು ಈಟಿವಿ ಭಾರತ ಗಮನಕ್ಕೆ ಬಂದಿದೆ.