ಮುಂಬೈ:ಪ್ರಪಂಚದ ಅತಿದೊಡ್ಡ ಗ್ರಾಹಕ ಕೇಂದ್ರಿತ ಪ್ರೈವೇಟ್ ಈಕ್ವಿಟಿ ಸಂಸ್ಥೆಗಳಲ್ಲೊಂದಾದ ಎಲ್ ಕ್ಯಾಟರ್‌ಟನ್ ಕಂಪನಿಯು ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಜಿಯೋ ಪ್ಲಾಟ್ಫಾರ್ಮ್ಸ್ಗಳಲ್ಲಿ 1894.50 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂದು ಘೋಷಿಸಿದೆ.
ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಎಲ್ ಕ್ಯಾಟರ್‌ಟನ್‌ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ 0.39 ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, 2020ರ ಏಪ್ರಿಲ್ 22 ರಿಂದ ಇಲ್ಲಿಯವರೆಗೆ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ಒಟ್ಟು 104,326.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.
ರಿಲಯನ್ಸ್ಗೆ 10 ಕಂಪನಿಗಳಿಂದ ಹೂಡಿಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು, ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್(ಕೃತಕ ಬುದ್ಧಿಮತ್ತೆ), ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.
1989ರಲ್ಲಿ ಸ್ಥಾಪನೆಯಾದ ಎಲ್ ಕ್ಯಾಟರ್ಟನ್, ವಿಶ್ವದೆಲ್ಲೆಡೆಯ ಪ್ರಮುಖ ಗ್ರಾಹಕ-ಕೇಂದ್ರಿತ ಬ್ರಾಂಡ್‌ಗಳ ಮೆಚ್ಚಿನ ಹೂಡಿಕೆ ಪಾಲುದಾರ ಸಂಸ್ಥೆಯಾಗಿದೆ. ಪೆಲೋಟಾನ್, ವ್ರೂಮ್, ಕ್ಲಾಸ್‌ಪಾಸ್, ಓನ್‌ಡೇಸ್, ಫ್ಯಾಬ್ ಇಂಡಿಯಾ ಮತ್ತಿತರ ಹಲವು ನೂತನ ಬ್ರಾಂಡ್‌ಗಳಲ್ಲಿ ಎಲ್ ಕ್ಯಾಟರ್ಟನ್ ಹೂಡಿಕೆ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, "ಗ್ರಾಹಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಹಾಗೂ ಡಿಜಿಟಲ್ ಶಕ್ತಿಯ ಸಾಮರ್ಥ್ಯವನ್ನು ಭಾರತಕ್ಕೆ ಪರಿಚಯಿಸುವ ನಮ್ಮ ಪ್ರಯಾಣದಲ್ಲಿ ಪಾಲುದಾರರಾಗಿ ಎಲ್ ಕ್ಯಾಟರ್‌ಟನ್ ಅನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ. ಗ್ರಾಹಕ-ಕೇಂದ್ರಿತ ವ್ಯವಹಾರಗಳನ್ನು ರೂಪಿಸುವಲ್ಲಿ ಎಲ್ ಕ್ಯಾಟರ್ಟನ್‌ನ ಅಮೂಲ್ಯ ಅನುಭವದ ಪ್ರಯೋಜನ ಪಡೆದುಕೊಳ್ಳುವುದನ್ನು ನಾನು ವಿಶೇಷವಾಗಿ ಎದುರು ನೋಡುತ್ತಿದ್ದೇನೆ, ಏಕೆಂದರೆ ಭಾರತವನ್ನು ಡಿಜಿಟಲ್ ನಾಯಕತ್ವದತ್ತ ಕೊಂಡೊಯ್ಯಲು ತಂತ್ರಜ್ಞಾನ ಮತ್ತು ಗ್ರಾಹಕ ಅನುಭವಗಳೆರಡೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ" ಎಂದು ಹೇಳಿದ್ದಾರೆ.