ತಿರುವನಂತಪುರಂ:ಕೊರೊನಾ ವೈರಸ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇರಳ ಸರ್ಕಾರ ಗುರುವಾರ 3 ಲಕ್ಷ ರೂ. 'ಒನ್ ಟೈಮ್' ಆರ್ಥಿಕ ನೆರವು ಪ್ರಕಟಿಸಿದೆ.
18 ವರ್ಷದವರೆಗೆ ಮಕ್ಕಳಿಗೆ ತಿಂಗಳಿಗೆ ₹ 2,000 ನೀಡಲಾಗುವುದು. ಅಲ್ಲದೇ, ಪದವಿ ಹಂತದವರೆಗೆ ಅವರ ಶಿಕ್ಷಣದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಕೇರಳ ಮಾತ್ರವಲ್ಲ, ಹಲವು ಇತರ ರಾಜ್ಯ ಸರ್ಕಾರಗಳು ಹಣಕಾಸಿನ ನೆರವು ಘೋಷಿಸಿವೆ. ಜೊತೆಗೆ, ಕೋವಿಡ್ -19 ಕಾರಣದಿಂದಾಗಿ ಪೋಷಕರು ನಿಧನರಾದ ಮಕ್ಕಳಿಗೆ ಶೈಕ್ಷಣಿಕ ಸಹಾಯ ನೀಡುವ ಆಶ್ವಾಸನ ಕೊಟ್ಟಿವೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೋವಿಡ್ -19 ಕಾರಣದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಶೈಕ್ಷಣಿಕ ವೆಚ್ಚ ಸರ್ಕಾರ ನೋಡಿಕೊಳ್ಳಲಿದೆ. ಅಂತಹ ಮಕ್ಕಳನ್ನು ಬೆಳೆಸುವ ಸಂಪೂರ್ಣ ವೆಚ್ಚವನ್ನು ದೆಹಲಿ ಸರ್ಕಾರ ಒದಗಿಸುತ್ತದೆ ಎಂದಿದ್ದಾರೆ.
ಒಡಿಶಾ ಮತ್ತು ಮಣಿಪುರ ಸರ್ಕಾರಗಳು ತಮ್ಮ ಹೆತ್ತವರನ್ನು ಕಳೆದುಕೊಂಡ ನಂತರ ಅನಾಥರಾದ ಮಕ್ಕಳನ್ನು ನೋಡಿಕೊಳ್ಳಲು ನಿರ್ಧರಿಸಿದ್ದವು.
ನಿನ್ನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಮಾತನಾಡಿ, ಕೋವಿಡ್ -19 ಕಾರಣದಿಂದಾಗಿ ಪೋಷಕರು ನಿಧನರಾದ ನಂತರ ದೇಶಾದ್ಯಂತ 577 ಮಕ್ಕಳು ಅನಾಥರಾಗಿದ್ದಾರೆ. ಇಬ್ಬರೂ ಪೋಷಕರನ್ನು ಕೋವಿಡ್ಗೆ ಕಳೆದುಕೊಂಡಿರುವ ಪ್ರತಿ ದುರ್ಬಲ ಮಗುವನ್ನು ಬೆಂಬಲಿಸಲು ಮತ್ತು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.