ತಿರುವನಂತಪುರ: ಕೋವಿಡ್-19 ಲಸಿಕೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆಗಳಿಗಾಗಿ 1,000 ಕೋಟಿ ರೂ. ಮೀಸಲಿಟ್ಟಿದೆ. ಆರೋಗ್ಯ ಸಂಬಂಧಿತ ಉಪಕರಣಗಳ ಖರೀದಿಗೆ 500 ಕೋಟಿ ರೂ. ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಹೇಳಿದ್ದಾರೆ.
ಲಸಿಕೆ ಕೊರತೆಯು ರಾಜ್ಯದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಪ್ರಮುಖ ಅಡಚಣೆಯಾಗಿದೆ. ಕೇರಳವು ಸ್ಥಳೀಯವಾಗಿ ಲಸಿಕೆ ಸಂಶೋಧನೆ ಮತ್ತು ತಯಾರಿಕೆಗೆ ದೀರ್ಘಕಾಲೀನ ಕ್ರಮಗಳನ್ನು ಪ್ರಸ್ತಾಪಿಸಿದೆ. ಕೇರಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅಧೀನದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ವೈರಾಲಜಿನಲ್ಲಿ (ಐಎವಿ) ಲಸಿಕೆ ಸಂಶೋಧನೆ ಪ್ರಾರಂಭವಾಗಲಿದೆ. ಲಸಿಕೆ ತಯಾರಕರನ್ನು ತಮ್ಮ ಘಟಕಗಳನ್ನು ಲೈಫ್ ಸೈನ್ಸಸ್ ಪಾರ್ಕ್‌ನಲ್ಲಿ ಸ್ಥಾಪಿಸಲು ಐಎವಿ ಮುಂದಾಗಲಿದೆ. ಇದಕ್ಕಾಗಿ ಬಜೆಟ್ನಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ.