ನವದೆಹಲಿ :ಅದಿರು, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ ಮತ್ತು ತಾಮ್ರದ ಸಾಗಣೆಯಲ್ಲಿನ ಆರೋಗ್ಯಕರ ಬೆಳವಣಿಗೆಯಿಂದಾಗಿ ಚೀನಾಕ್ಕೆ ಭಾರತದ ರಫ್ತು ಪ್ರಮಾಣ ಕಳೆದ ವರ್ಷದ 17.9 ಬಿಲಿಯನ್ ಡಾಲರ್‌ನಿಂದ 2020ರಲ್ಲಿ 20.157 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ನೆರೆಯ ದೇಶದಿಂದ ಆಮದು ಪ್ರಮಾಣ ಶೇ.10.87ರಷ್ಟು ಕುಸಿದಿದೆ. 2019ರಲ್ಲಿ 74.92 ಬಿಲಿಯನ್ ಡಾಲರ್‌ನಿಂದ 66.78 ಬಿಲಿಯನ್ ಡಾಲರ್‌ಗೆ ತಲುಪಿದೆ. ಚೀನಾದೊಂದಿಗಿನ ವ್ಯಾಪಾರ ಕೊರತೆ 2019ರಲ್ಲಿ 56.95 ಬಿಲಿಯನ್ ಡಾಲರ್‌ನಿಂದ 2020ರಲ್ಲಿ 45.91 ಬಿಲಿಯನ್ ಡಾಲರ್‌ಗೆ ಇಳಿದಿದೆ ಎಂಬುದು ದತ್ತಾಂಶದಿಂದ ತಿಳಿದು ಬಂದಿದೆ.
ಹಿಂದಿನ ವರ್ಷದ 92.89 ಶತಕೋಟಿ ಡಾಲರ್‌ಗೆ ಹೋಲಿಸಿದರೆ 2020ರಲ್ಲಿ ದ್ವಿಪಕ್ಷೀಯ ವ್ಯಾಪಾರವು ಶೇ.5.64ರಷ್ಟು ಇಳಿದು, 87.65 ಶತಕೋಟಿಗೆ ತಲುಪಿದೆ. ಕೃಷಿ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆ ದಾಖಲಿಸಿದ್ದು, ರಫ್ತು ಸರಕುಗಳಲ್ಲಿ ಸಕ್ಕರೆ, ಸೋಯಾಬೀನ್ ಎಣ್ಣೆ ಮತ್ತು ತರಕಾರಿಗಳ ಕೊಬ್ಬಿನಾಂಶ ಹಾಗೂ ತೈಲಗಳು ಮಹತ್ವದ ಕೊಡುಗೆ ನೀಡಿವೆ. ಮಾವಿನಹಣ್ಣು, ಮೀನಿನ ಎಣ್ಣೆ, ಚಹಾ ಮತ್ತು ತಾಜಾ ದ್ರಾಕ್ಷಿಗಳ ರಫ್ತು ಕುಸಿದಿದೆ.