ನವದೆಹಲಿ:ಅತಿಯಾದ ಕಲ್ಲಿದ್ದಲು ಉರಿಸುವಿಕೆ, ನೀರಿನ ಕೊರತೆ ಮತ್ತು ಕಡಿಮೆ ವೆಚ್ಚದ ನವೀಕರಿಸಬಹುದಾದ ವಸ್ತುಗಳ ಏರಿಕೆಯಿಂದಾಗಿ ಕಲ್ಲಿದ್ದಲಿನ ಇಂಧನ ಕ್ಷೇತ್ರವು ತೀವ್ರ ಒತ್ತಡ ಎದುರಿಸುತ್ತಿದೆ.
'ಭಾರತದ ಕಲ್ಲಿದ್ದಲು ವಲಯ ಎದುರಿಸುತ್ತಿರುವ ಅಪಾಯಗಳು' ಎಂಬ ಶೀರ್ಷಿಕೆಯಡಿ ಅಮೆರಿಕ ಮೂಲದ ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಆ್ಯಂಡ್ ಫಿನಾನ್ಶಿಯಲ್ ಅನಾಲಿಸಿಸ್ (ಐಇಇಎಫ್ಎ) ಮತ್ತು ಅಪ್ಲೈಡ್ ಎಕನಾಮಿಕ್ಸ್ ಕ್ಲಿನಿಕ್ (ಎಇಸಿ) ತನ್ನ ಜಂಟಿ ವರದಿಯಲ್ಲಿ ಈ ವಿಷಯವನ್ನು ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಶಕ್ತಿಯುತವಾದ ಖನಿಜಗಳನ್ನು ಒದಗಿಸುವ ಭೂಮಿ ಗಮನಾರ್ಹವಾಗಿ ಬದಲಾಗಿದೆ. ವಿಶೇಷವಾಗಿ ಉಷ್ಣ ಕಲ್ಲಿದ್ದಲು ವಲಯ ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದೆ. ಈ ಬಗ್ಗೆ ತುರ್ತು ಗಮನ ಹರಿಸಬೇಕಾಗಿದ್ದು, ಅದರಲ್ಲಿ ನೀರು ಅತ್ಯಂತ ಪ್ರಮುಖವಾದ ಅಂಶವೆಂದು ವರದಿಯ ಸಹ- ಲೇಖಕ ಡೇವಿಡ್ ಷ್ಲಿಸ್ಸೆಲ್ ಅವರು ಹೇಳಿದರು.
2010ರ ದಶಕದ ಆರಂಭದಲ್ಲಿ ಸ್ಥಾವರಗಳು ಯಥೇಚ್ಛ ಪ್ರಮಾಣದಲ್ಲಿ ಕಲ್ಲಿದ್ದಲು ಉರಿಸಿದವು. ಭಾರತದಲ್ಲಿನ ಸ್ಥಾವರಗಳಲ್ಲಿ ಕಲ್ಲಿದ್ದಲು ಉರಿಸುವಿಕೆಯು ಗರಿಷ್ಠ ಬೇಡಿಕೆಗಿಂತ ಶೇ 20ರಷ್ಟು ಹೆಚ್ಚಾಗಿದೆ ಮತ್ತು ಸರಾಸರಿ ಬೇಡಿಕೆ ಮಟ್ಟಕ್ಕಿಂತ 50 ಗಿಗಾವ್ಯಾಟ್ (ಜಿಡಬ್ಲ್ಯೂ) ವಿದ್ಯುತ್ ಹೆಚ್ಚಾಗಿದೆ.
ಭಾರತದಾದ್ಯಂತ ಅಂತರ್ಜಲದ ಮಟ್ಟ ಕುಸಿಯುತ್ತಿದೆ. 2012ರಿಂದ ಒಟ್ಟು ವಾರ್ಷಿಕ ಮಳೆ ಮತ್ತು ಮಾನ್ಸೂನ್ ಮಳೆ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಕೆಳಗಿದೆ. ಇದು ಕಲ್ಲಿದ್ದಲು ಉತ್ಪಾದನೆಯ ಪ್ರಮುಖ ಅಂಗ ಹಾಗೂ ಅತ್ಯಂತ ಕಾಳಜಿಯಿಂದ ಬಳಸಿಕೊಳ್ಳಬೇಕಿದ್ದು, ಉಗಿ ಉತ್ಪಾದನೆ ಮತ್ತು ತಂಪಾಗಿಸುವಿಕೆಗೆ ಸಾಕಷ್ಟು ಪ್ರಮಾಣದ ನೀರಿನ ಅಗತ್ಯವಿರುತ್ತದೆ. ನೀರಿನ ಕೊರತೆಯು ಮೇಲಿನ ಎರಡಕ್ಕಿಂತ ಹೆಚ್ಚಾಗಿ ಕಾಡಲಿದೆ.
ಕಡಲತೀರದ ಮತ್ತು ಕಡಲಾಚೆಯ ಪವನ ಹಾಗೂ ಸೌರಶಕ್ತಿ ಬೆಲೆಗಳು ಇಳಿಮುಖವಾಗಲಿದ್ದು, ಕಲ್ಲಿದ್ದಲಿನಿಂದ ಉತ್ಪಾದಿಸುವ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ.
ನೀರಿನ ಅಭಾವದಿಂದ 2013-17 ನಡುವೆ 61 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಸ್ಥಗಿತಗೊಂಡಿವೆ. ಇದರಿಂದಾಗಿ 17,000 ಗಿಗಾವ್ಯಾಟ್ ಅವಧಿಯ ವಿದ್ಯುತ್ ಹಾಗೂ ಆದಾಯ ಕಡಿತಗೊಂಡಿದೆ. ಭಾರತದಲ್ಲಿ ಪ್ರಸ್ತುತ ಸುಮಾರು 114 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿವೆ. ಅವುಗಳಲ್ಲಿ ಸುಮಾರು 32 ಸ್ಥಾವರಗಳು (17 ಸ್ಥಾವರಗಳು ಕೊರತೆ, 17 ತೀವ್ರ ಕೊರತೆ) ಕಲ್ಲಿದ್ದಲಿನ ಅಭಾವ ಎದುರಿಸುತ್ತಿವೆ. ಉಳಿದ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆಯಾದರೂ, ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ.
ಕಲ್ಲಿದ್ದಲು ಗಣಿಗಳಿರುವ ರಾಜ್ಯಗಳು:
ಛತ್ತೀಸ್‌ಗಢದ ಕೋರ್ಬಾ, ತೆಲಂಗಾಣದ ಸಿಂಗರೇಣಿ, ಜಾರ್ಖಂಡ್ನ ಜರಿಯಾ, ಮಹಾರಾಷ್ಟ್ರದ ನಾಗಪುರ, ಪಶ್ಚಿಮ ಬಂಗಾಳದ ರಾಣಿಗಂಜ್, ತಮಿಳುನಾಡಿನ ನೈವೇಲಿ ಮತ್ತು ಮಧ್ಯಪ್ರದೇಶದ ಸಿಂಗ್ರೌಲಿ ಹಾಗೂ ಉಮಾರಿಯಾಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತದೆ. ದೇಶದಲ್ಲಿ ಗಣಿಗಾರಿಕೆ ಮಾಡುವ ಒಟ್ಟು ಕಲ್ಲಿದ್ದಲಿನ ಶೇ.73ರಷ್ಟನ್ನು ವಿದ್ಯುತ್ ಉತ್ಪಾದನೆಗೇ ಬಳಸಲಾಗುತ್ತದೆ. ದೇಶದಲ್ಲಿ ಕಲ್ಲಿದ್ದಲಿನಿಂದ ವರ್ಷಕ್ಕೆ ಸುಮಾರು 1,86,492 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.