ಹೈದರಾಬಾದ್:ಅನೇಕ ಭಾರತೀಯ ಹಾಗೂ ಭಾರತೀಯ ಮೂಲದ ನಿವಾಸಿಗರು ಹತ್ತು ಹಲವು ವಿಶ್ವಪ್ರಸಿದ್ಧ ಕಂಪನಿಗಳ ಸಿಇಒಗಳಾಗಿ ಮಿಂಚುತ್ತಿದ್ದಾರೆ. ಅವರ ಚತುರತೆ ಕಂಡು ಅನೇಕ ಕಂಪನಿಗಳು ಬಡ್ತಿ ನೀಡುತ್ತಿವೆ. ಇದಕ್ಕೆ ಕಾರಣ ಏನಿರಬಹುದು ಗೊತ್ತಾ?
ಭಾರತೀಯ ಮೂಲದ (ಮುಂಬೈ) ಪರಾಗ್ ಅಗರ್ವಾಲ್ (45) ಟ್ವಿಟರ್ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ನೇಮಕಗೊಂಡಿದ್ದಾರೆ. ಇವರನ್ನೂ ಸೇರಿಸಿ ಗೂಗಲ್, ಮೈಕ್ರೋಸಾಫ್ಟ್, ಅಡೋಬ್ ಮತ್ತು ಐಬಿಎಂ ನಂತಹ ವಿಶ್ವದ ಹಲವು ಉನ್ನತ ಕಂಪನಿಗಳನ್ನು ಮುನ್ನಡೆಸುತ್ತಿರುವವರು ಭಾರತೀಯ ಮೂಲದ (ಸಿಇಒ) ಚತುರರೇ ಅನ್ನೋದು ಮತ್ತೊಂದು ಖುಷಿ ನೀಡುವ ವಿಚಾರ.
ಪರಾಗ್ ಅಗರ್ವಾಲ್ ಸಂಬಳ ಎಷ್ಟು ಗೊತ್ತಾ?
ಟ್ವಿಟರ್ನ ಹೊಸ CEO ಆಗಿ ನೇಮಕಗೊಂಡ ಪರಾಗ್ ಅವರ ವರ್ಷಿಕ ಸಂಬಳ ಒಂದು ಮಿಲಿಯನ್ ಡಾಲರ್ (ಸುಮಾರು 7 ಕೋಟಿ 40 ಲಕ್ಷ ರೂ.) ಆಗಿದೆಯಂತೆ. ಭಾರತೀಯ ಮೂಲದ ವ್ಯಕ್ತಿ ಇಷ್ಟು ದೊಡ್ಡ ಹುದ್ದೆ ಪಡೆದಿದ್ದು ಮತ್ತು ಈ ಪ್ರಮಾಣದ ಸಂಬಳ ಪಡೆಯುತ್ತಿರುವ ಬಗ್ಗೆ ಜಾಲತಾಣದಲ್ಲಿ ಭಾರಿ ಪ್ರಶಂಸೆಯ ಮಾತುಗಳು ಹರಿದಾಡುತ್ತಿವೆ.
ಇವರನ್ನೇ ಏಕೆ ಸಿಇಒ ಆಗಿ ನೇಮಿಸಲಾಯಿತು?
'ಪರಾಗ್ ಸಿಇಒ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ ಹುಡುಗ. ಎಲ್ಲ ಅಂಶಗಳನ್ನು ಪರಿಗಣಿಸಿ ಮತ್ತು ಕಠಿಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕವೇ ಅವರಿಗೆ ಈ ಹುದ್ದೆ ನೀಡಲಾಗಿದೆ. ಅವರು ಕಂಪನಿ ಮತ್ತು ಕಂಪನಿಯ ಅಗತ್ಯತೆಗಳನ್ನು ಎಷ್ಟು ಆಳವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನನಗೆ ಗೊತ್ತಿದೆ. ಅದಕ್ಕಾಗಿಯೇ ನಾವು ಪರಾಗ್ ಅವರನ್ನು ಸಿಇಒ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ. ಕಂಪನಿಯ ಬೆಳವಣಿಗೆಗೆ ಅವರ ಕೊಡುಗೆ ಸಾಕಷ್ಟಿದೆ' ಎಂದು ಕಂಪನಿಯ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಜಾಕ್ ಡೋರ್ಸೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ಸಿಇಒಗಳ ಪಟ್ಟಿ:
ಪರಾಗ್ ಅವರ ನೇಮಕದೊಂದಿಗೆ ಭಾರತೀಯರ (ಭಾರತೀಯ ಮೂಲದ) ಸಂಖ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿದೆ. ಪ್ರಸ್ತುತ ಯಾವ ಯಾವ ಕಂಪನಿಗಳಲ್ಲಿ ಸಿಇಒ ಆಗಿದ್ದಾರೆ ಅನ್ನೋದನ್ನು ಇಲ್ಲಿ ಕೊಡಲಾಗಿದೆ.
ಅಡೋಬ್ - ಶಂತನು ನಾರಾಯಣ್ (ಜನನ ಮೇ 27, 1963)
ಅಮೆರಿಕನ್ ಉದ್ಯಮಿಯಾಗಿರುವ ಶಂತನು ನಾರಾಯಣ್ ಸದ್ಯ ಅಡೋಬ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ನಾರಾಯಣ್ ಅವರು ತೆಲಂಗಾಣದ ಹೈದರಾಬಾದ್ ಮೂಲದವರಾಗಿದ್ದು ಇಲ್ಲಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿಇ ಪದವಿ ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಎಂಬಿಎ ಮುಗಿಸಿದ ಅವರು ವಿಶ್ವಪ್ರಸಿದ್ಧ ಕಂಪನಿಗಳ ಸಿಇಒಗಳಾಗಿ ಮಿಂಚುತ್ತಿದ್ದಾರೆ.
ಗೂಗಲ್ - ಸುಂದರ್ ಪಿಚೈ (ಜನನ 12 July 1972)
ಪ್ರಸ್ತುತ ಪ್ರಸಿದ್ಧ ಗೂಗಲ್ ಕಂಪನಿಯ ಸಿಇಒ ಆಗಿರುವ ಸುಂದರ್ ಪಿಚೈ ಮೂಲತಃ ತಮಿಳುನಾಡಿದ ಮದುರೈನವರು. ಮದ್ರಾಸಿನಲ್ಲಿ ತಮ್ಮ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಪಿಚೈ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಹಲವು ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ ಪಿಚೈ ಗೂಗಲ್ ಕಂಪನಿಯ ಸಿಇಒ ಅನ್ನೋದು ಖುಷಿ ವಿಷಯ.
ಮೈಕ್ರೋಸಾಫ್ಟ್ - ಸತ್ಯ ನಾರಾಯಣ ನಾಡೆಲ್ಲಾ (ಜನನ 19 August 1967)
ಜಗತ್ತಿನ ಸಾಫ್ಟ್ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್‌ನ ಮುಖ್ಯ ನಿರ್ವಹಣಾಧಿಕಾರಿಯಾಗಿರುವ ಸತ್ಯ ನಾರಾಯಣ ನಾಡೆಲ್ಲಾ ಇವರು ಕೂಡ ಭಾರತದವರೇ. ತೆಲಂಗಾಣದ ಮೂಲದವರಾದ ನಾಡೆಲ್ಲಾ, ಸದ್ಯ ಅಮೆರಿಕದ ನಾಗರಿಕತ್ವವನ್ನು ಹೊಂದಿದ್ದಾರೆ. 1988 ರಲ್ಲಿ ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದ ಅವರು ಸದ್ಯ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷರು ಹೌದು.
ಐಬಿಎಂ - ಅರವಿಂದ ಕೃಷ್ಣ (ಜನನ 1962)
ಆಂಧ್ರ ಪ್ರದೇಶದ ಮೂಲದವರಾದ ಅರವಿಂದ ಕೃಷ್ಣ 1985 ರಲ್ಲಿ ಕಾನ್ಪುರದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ BTech ಪದವಿ ಪಡೆದಿದ್ದಾರೆ. ಜಗತ್ತಿನ ಸಾಫ್ಟ್ವೇರ್ ದಿಗ್ಗಜ ಕಂಪನಿ ಐಬಿಎಂನ ಅಧ್ಯಕ್ಷ ಹಾಗೂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೊವಾರ್ಟಿಸ್ - ವಸಂತ ನರಸಿಂಹನ್ (ಜನನ August 26, 1976)
ಭಾರತದ ತಮಿಳುನಾಡು ಮೂಲದವರಾದ ವಸಂತ ನರಸಿಂಹನ್ 970 ರ ದಶಕದಲ್ಲೇ ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದಿದ್ದಾರೆ. ಹಾಗಾಗಿ ಅಮೆರಿಕದ ನಾಗರಿಕತ್ವ ಹೊಂದಿದ್ದಾರೆ. ಚಿಕಾಗೋ ವಿಶ್ವವಿದ್ಯಾನಿಲಯದಿಂದ ಜೈವಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಸಂತ್, ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಿಂದ MD ಮತ್ತು ಜಾನ್ ಎಫ್. ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್‌ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2005ರಲ್ಲಿ ನೊವಾರ್ಟಿಸ್‌ಗೆ ಸೇರಿದ ವಸಂತ ನರಸಿಂಹನ್, ಸದ್ಯ ಈ ಸಂಸ್ಥೆಯ CEO ಆಗಿ ಆಗಿದ್ದಾರೆ.
ಡಿಯಾಜಿಯೊ - ಇವಾನ್ ಮೆನೆಝ್ಸ್ (ಜನನ July 1959)
ಅಮೆಕನ್-ಬ್ರಿಟಿಷ್ ನಾಗರಿಕತ್ವವನ್ನು ಹೊಂದಿರುವ ಇವಾನ್ ಮೂಲತಃ ಮಹಾರಾಷ್ಟ್ರದ ಪುಣೆಯವರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್‌ನಲ್ಲಿ ಹಾಗೂ ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ತಮ್ಮ ಶಿಕ್ಷಣ ಪೂರೈಸಿದ್ದಾರೆ. 1997 ರಲ್ಲಿ ಡಿಯಾಜಿಯೊಗೆ ಸೇರಿದ ಇವಾನ್, ವಿವಿಧ ಉನ್ನತ ಹುದ್ದೆಗಳ ಬಳಿಕ ಈಗ ಇದೇ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾರೆ.