ನವದೆಹಲಿ: ಪಳೆಯುಳಿಕೆ ಇಂಧನದ ಬದಲಾಗಿ ಪರಿಸರ ಸ್ನೇಹಿ ಇಂಧನವು, ಮುಂದಿನ ದಿನಗಳಲ್ಲಿ ಸೌರ ಮತ್ತು ಹೈಡ್ರೋಜನ್ ಶಕ್ತಿಯ ಪ್ರಮುಖ ಸಂಪನ್ಮೂಲವಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ. ಭಾರತವು ತನ್ನ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಪರಿಸರ ಸ್ನೇಹಿ ಇಂಧನವನ್ನು ಬಳಸುತ್ತಿರುತ್ತದೆ ಎಂದಿದ್ದಾರೆ.
ಹವಾಮಾನ ವೈಪರಿತ್ಯದಿಂದ ಇಡೀ ವಿಶ್ವವು ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಪರಿಹಾರವೆಂದರೇ ಅದು ಪರಿಸರ ಸ್ನೇಹಿ ಇಂಧನದ ಬಳಕೆಯಾಗಿದೆ. ಇದನ್ನು ನಾವು ಪರಸ್ಪರ ಸಹಕಾರ ಮತ್ತು ಪಾಲುದಾರಿಕೆಯಿಂದ ಮಾಡಬೇಕಾಗಿದೆ. ಪ್ರಪಂಚವು ಹಳೆಯ ಶಕ್ತಿಯಿಂದ ಹೊಸ ಶಕ್ತಿಗೆ ಶೀಘ್ರ ಪರಿವರ್ತನೆಯಾಗಬೇಕು ಎಂದರು.
ನಮ್ಮ ಯುವ ಮತ್ತು ಸೂಪರ್-ಪ್ರತಿಭಾನ್ವಿತ ಉದ್ಯಮಿಗಳು ಮುಂದಿನ 20 ವರ್ಷಗಳಲ್ಲಿ ಭಾರತವನ್ನು ಗ್ರೀನ್ ಎನರ್ಜಿ ಸೂಪರ್ ಪವರ್ ಮಾಡಲಿದ್ದಾರೆ. ಇದೇ ಸಮಯದಲ್ಲಿ ಭಾರತವು ಐಟಿ ಸೂಪರ್ ಪವರ್ ಆಗಿ ಮಾರ್ಪಡಲಿದೆ ಎಂದು ಅಂಬಾನಿ ಹೇಳಿದರು.