ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ವಿಶ್ವದ ಪ್ರಮುಖ ಆರ್ಥಿಕತೆಗಳನ್ನು ಒಟ್ಟುಗೂಡಿಸುವ ಪ್ರಭಾವಶಾಲಿ ಗುಂಪಿನ ಜಿ-20 ಗಾಗಿ ಭಾರತದ ಶೆರ್ಪಾ ಆಗಿ ನೇಮಕ ಮಾಡಲಾಗಿದೆ.
ಜೊತೆಗೆ ಭಾರತವು 2023ರ ಜಿ-20 ಶೃಂಗಸಭೆಯ ನೇತೃತ್ವ ವಹಿಸಲಿದೆ. 2022ರ ಬದಲಿಗೆ 2023ರ ಶೃಂಗಸಭೆ ಭಾರತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ಜಿ 20 ಶೃಂಗಸಭೆ ಇಟಾಲಿಯನ್ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 30 ರಿಂದ 31ರ ವರೆಗೆ ನಡೆಯಲಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಜಿ-20 ಗಾಗಿ ಭಾರತದ ಶೆರ್ಪಾ ಆಗಿ ನೇಮಕಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
2014 ರಿಂದ ಜಿ 20 ಶೃಂಗಸಭೆಯಲ್ಲಿ ಭಾರತದ ಪ್ರಾತಿನಿಧ್ಯವನ್ನು ಪ್ರಧಾನಿ ಮೋದಿ ಮುನ್ನಡೆಸುತ್ತಿದ್ದಾರೆ. 1999 ರಲ್ಲಿ ಜಿ-20 ಪ್ರಾರಂಭವಾದಾಗಿನಿಂದಲೂ ಭಾರತವು ಅದರ ಸದಸ್ಯ ರಾಷ್ಟ್ರವಾಗಿದೆ.
ಭಾರತವು ಡಿಸೆಂಬರ್ 1, 2022 ರಿಂದ ಜಿ-20 ಅಧ್ಯಕ್ಷತೆಯನ್ನು ನಡೆಸಲಿದೆ ಮತ್ತು 2023 ರಲ್ಲಿ ಮೊದಲ ಬಾರಿಗೆ ಜಿ-20 ನಾಯಕರ ಶೃಂಗಸಭೆಯನ್ನು ಕರೆಯಲಿದೆ ಎಂದು ಎಂಇಎ ಹೇಳಿದೆ. ಭಾರತವು 2021ರ ಡಿಸೆಂಬರ್ 1 ರಿಂದ ನವೆಂಬರ್ 30, 2024ರ ವರೆಗೆ ಜಿ-20 ಟ್ರೊಯಿಕಾ (ಹಿಂದಿನ, ಪ್ರಸ್ತುತ ಮತ್ತು ಒಳಬರುವ ಜಿ 20 ಪ್ರೆಸಿಡೆನ್ಸಿಗಳ) ಭಾಗವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಜಿ- 20 ವಿಶ್ವದ 19 ಪ್ರಮುಖ ಆರ್ಥಿಕತೆಗಳು ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಟ್ಟುಗೂಡಿಸುತ್ತದೆ, ಇದರ ಸದಸ್ಯರು ಜಾಗತಿಕ ಜಿಡಿಪಿಯ ಶೇ.80 ಪ್ರತಿಶತಕ್ಕೂ ಹೆಚ್ಚು, ಜಾಗತಿಕ ವ್ಯಾಪಾರದ ಶೇ.75 ಪ್ರತಿಶತ ಮತ್ತು ಜಾಗತಿಕ ಜನಸಂಖ್ಯೆಯ ಶೇಕಡಾ 60 ರಷ್ಟನ್ನು ಪ್ರತಿನಿಧಿಸಲಿದ್ದಾರೆ.
ಜಿ-20 ಸದಸ್ಯ ರಾಷ್ಟ್ರಗಳೆಂದರೆ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಜರ್ಮನಿ, ಫ್ರಾನ್ಸ್, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕ.
2021 ರಲ್ಲಿ ಇಟಲಿಯಲ್ಲಿ, 2022 ರಲ್ಲಿ ಇಂಡೋನೇಷ್ಯಾ, 2023 ರಲ್ಲಿ ಭಾರತ ಮತ್ತು 2024 ಬ್ರೆಜಿಲ್ನಲ್ಲಿ ನಮ್ಮ ಮುಂದಿನ ಜಿ-20 ಸಭೆಗಳನ್ನು ನಡೆಸಲು ನಿರ್ಧರಿಸಿದ್ದೇವೆ ಎಂದು ಜಿ 20 ಶೃಂಗಸಭೆ ನಾಯಕರು ತಿಳಿಸಿದ್ದಾರೆ.
ಇದನ್ನೂ ಓದಿ:ಪೂಂಚ್ನಲ್ಲಿ ಭದ್ರತಾ ಪಡೆಗಳ ದಾಳಿ: ಓರ್ವನ ಬಂಧನ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ