ನವದೆಹಲಿ: 2014ರ ಚುನಾವಣಾ ಪ್ರಚಾರದ ವೇಳೆ ಸ್ವಿಸ್ ಬ್ಯಾಂಕ್ನಲ್ಲಿರುವ ಕಾಳಧನಿಕರ ಹಣವನ್ನು ಮರಳಿ ಭಾರತಕ್ಕೆ ತರುವುದಾಗಿ ಘೋಷಿಸಿದ್ದ ಮೋದಿ ಮಾತು ಬರೋಬ್ಬರಿ ಐದು ವರ್ಷದ ಬಳಿಕ ಮಹತ್ವ ಪಡೆದಿದೆ.
ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಖಾತೆಗಳ ಸಂಪೂರ್ಣ ದಾಖಲೆಗಾಗಿ ಭಾರತ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ದೊರೆತಿದ್ದು, ಇಂದಿನಿಂದ ಭಾರತೀಯರ ಅಕೌಂಟ್ ಮಾಹಿತಿ ಲಭ್ಯವಾಗಲಿದೆ.
ಸ್ವಿಡ್ಜರ್ಲ್ಯಾಂಡ್ ಬ್ಯಾಂಕಿನಲ್ಲಿ ಕಳೆದ ವರ್ಷ ಭಾರತೀಯರು ನಡೆಸಿರುವ ಖಾತೆಗಳ ವ್ಯವಹಾರ ಭಾರತ ಸರ್ಕಾರಕ್ಕೆ ದೊರೆಯಲಿದೆ. ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ನಡೆಸಿರುವ ಹೋರಾಟಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಈ ಮೂಲಕ ಸ್ವಿಸ್ ಬ್ಯಾಂಕ್ನ ಗೌಪ್ಯತೆ ಕೊನೆಯಾಗಲಿದೆ ಎಂದು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಸ್ವಿಡ್ಜರ್ಲ್ಯಾಂಡ್ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಭಾರತೀಯ ಸರ್ಕಾರ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಈ ವಿಚಾರವನ್ನು ಭಾರತೀಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.