ನವದೆಹಲಿ:ಜಾಗತಿಕ ಆವಿಷ್ಕಾರ ಸೂಚ್ಯಂಕದ (ಗ್ಲೋಬಲ್ ಇನೋವೇಷನ್ ಇಂಡೆಕ್ಸ್) 2019ನೇ ಸಾಲಿನಲ್ಲಿ ಭಾರತ 57ನೇ ಸ್ಥಾನದಿಂದ 52ನೇ ಸ್ಥಾನಕ್ಕೆ ಜಿಗಿದಿದೆ.
ಇನೋವೇಟಿವ್ ಮತ್ತು ನವಿನ ಮಾದರಿಯ ತಂತ್ರಜ್ಞಾನಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಭಾರತ, ಕಳೆದ ವರ್ಷ ಜಾಗತಿಕ ಸೂಚ್ಯಂಕದಲ್ಲಿ 57ನೇ ಸ್ಥಾನದಲ್ಲಿತ್ತು. ಒಂದೇ ವರ್ಷದಲ್ಲಿ 5 ಅಂಕಗಳ ಜಿಗಿತ ದಾಖಲಿಸಿದೆ. 2015ರಲ್ಲಿ 81ನೇ ಸ್ಥಾನದಲ್ಲಿದ್ದು, ಮೂರು ವರ್ಷಗಳಲ್ಲಿ 29 ಅಂಕ ಏರಿಕೆ ಕಂಡಿದೆ.
ಐಸಿಟಿ ಸೇವೆಗಳ ರಫ್ತು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರು, ವಿಶ್ವವಿದ್ಯಾಲಯಗಳ ಗುಣಮಟ್ಟ, ಒಟ್ಟು ಬಂಡವಾಳ ರಚನೆ, ವ್ಯಾಪಕ ಆರ್ಥಿಕ ಹೂಡಿಕೆಗಳ ಅಳತೆ ಮತ್ತು ಸೃಜನಶೀಲ ಸರಕುಗಳ ರಫ್ತು ಸೇರಿದಂತೆ ಇತರ ನಾವೀನ್ಯತೆಯಲ್ಲಿ ಭಾರತವು ವಿಶ್ವದ ಅಗ್ರಸ್ಥಾನದಲ್ಲಿ ಸಾಗುತ್ತಿದೆ ಎಂದು ವರದಿ ಹೇಳಿದೆ.