ನವದೆಹಲಿ:ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಫರ್ಮಾನು ಹೊರಡಿಸಿದ ಬಳಿಕ ವೆನಿಜುವೆಲಾದ ಮೇಲೂ ನಿರ್ಬಂಧ ಹೇರಿದೆ. ಹೀಗಾಗಿ, ಭಾರತ ದೇಶದಲ್ಲಿನ ಬೇಡಿಕೆ ಪೂರೈಸಲು ಬ್ರೆಜಿಲ್ ಮತ್ತು ಮೆಕ್ಸಿಕೊದಿಂದ ಹೆಚ್ಚಿನ ಪ್ರಮಾಣದ ತೈಲ ಆಮದು ಮಾಡಿಕೊಳ್ಳಲು ಮುಂದಾಗಿದೆ.
ಭಾರತ ಪ್ರತಿ ವರ್ಷವೂ ದೇಶದಲ್ಲಿನ ಬೇಡಿಕೆ ಪೂರೈಸಲು ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಅಗ್ಗದ ಬೆಲೆಗೆ ಹೆಚ್ಚು ಖರೀದಿಸಿ ಆಮದು ವೆಚ್ಚ ತಗ್ಗಿಸಿಕೊಳ್ಳುವ ಉದ್ದೇಶದಿಂದ ಸೌದಿ ಅರೇಬಿಯಾದಂತಹ ಸಾಂಪ್ರದಾಯಿಕ ಮಾರುಕಟ್ಟೆಗಳಿಂದ ಆಮದು ಪ್ರಮಾಣ ತಗ್ಗಿಸಿಕೊಂಡು ಬರುತ್ತಿತ್ತು. ಅಮೆರಿಕ ಇರಾನ್ ಮೇಲೆ ಆರ್ಥಿಕ ಬಂಧನ ಹೇರಲ್ಪಟ್ಟ ಬಳಿಕ ಇದು ಇನ್ನಷ್ಟು ಪ್ರಮಾಣದಲ್ಲಿ ಇಳಿಕೆಯಾಗಿತ್ತು.
ಭಾರತ ಶೇ.80ರಷ್ಟು ಇಂಧನ ತರಿಸಿಕೊಳ್ಳುತ್ತಿದ್ದು, ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನ್ ಅತಿ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿವೆ. 2017-18ರಲ್ಲಿ ವೆನಿಜುವೆಲಾ ಶೇ.11ರಷ್ಟು ತೈಲ ರಫ್ತು ಮಾಡಿದ್ದು, ಅದು 18 ಮಿಲಿಯನ್ ಟನ್ಗಳಷ್ಟಿದೆ. ಅಲ್ಲಿನ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಪಿಡಿವಿಎಸ್‌ಎ ನಿತ್ಯ 1.15 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ರಫ್ತು ಮಾಡುತ್ತಿದೆ. ಫೆಬ್ರವರಿಯಲ್ಲಿ ಅಮೆರಿಕ ವೆನಿಜುವೆಲಾ ಮೇಲೆ ಆರ್ಥಿಕ ದಿಗ್ಬಂಧನ ಹೇರಿ ತೈಲ ಖರೀದಿಸದಂತೆ ಫರ್ಮಾನು ಹೊರಡಿಸಿದ ಬಳಿಕ ಭಾರತ ಪರ್ಯಾಯ ಮಾರುಕಟ್ಟೆ ಹುಡುಕಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.