ನವದೆಹಲಿ:ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತ 27.1 ಕೋಟಿಯಷ್ಟು ಜನರನ್ನು ಬಡತನದಿಂದ ಮೇಲೆತ್ತಿದೆ ಎಂದು ವಿಶ್ವ ಸಂಸ್ಥೆಯ ಇತ್ತೀಚಿನ ವರದಿ ತಿಳಿಸಿದೆ.
ಬಡತನವನ್ನು ಹೋಗಲಾಡಿಸಲು ಕೈಗೊಂಡಿರುವ ಉಪಕ್ರಮ ಮತ್ತು ಅದರ ವೇಗ ಅಳೆಯಲು ಜಾಗತಿಕವಾಗಿ ಬಳಕೆ ಮಾಡುವ ಬಹುಬಗೆಯ ಬಡತನ ಸೂಚಿ (ಎಂಪಿಐ) ಬಳಸಲಾಗಿದೆ. ಈ ವಿಧಾನದಲ್ಲಿ ಅಪೌಷ್ಟಿಕತೆ, ಶಿಕ್ಷಣ, ಶೌಚಾಲಯ ಮುಂತಾದ ಅಂಶಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ.
ಯಥೇಚ್ಚವಾಗಿ ಬಡತನ ಹೊಂದಿರುವ ಬಾಂಗ್ಲಾ, ಕಾಂಬೋಡಿಯಾ, ಕಾಂಗೋ ರಿಪಬ್ಲಿಕ್, ಇಥಿಯೋಪಿಯಾ, ಹೈಟಿ, ಭಾರತ, ನೈಜೀರಿಯಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂ ರಾಷ್ಟ್ರಗಳಲ್ಲಿ ಬಡತನದ ಪ್ರಮಾಣ ತಗ್ಗಿದೆ. ಅಧ್ಯಯನಕ್ಕೆ ಒಟ್ಟು 101 ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ 31 ಕಡಿಮೆ ಆದಾಯ, 68 ಮಧ್ಯಮ ಆದಾಯ ಹಾಗೂ 2 ಅತ್ಯಧಿಕ ಆದಾಯ ರಾಷ್ಟ್ರಗಳಿವೆ ಎಂದು ಹೇಳಿದೆ.
ಭಾರತವು 2006-2016ರ ಅವಧಿಯಲ್ಲಿ ದೇಶದಲ್ಲಿನ 27.1 ಕೋಟಿ ಜನರಲ್ಲಿನ ಬಡತನವನ್ನು ಹೋಗಲಾಡಿಸಿ ಪ್ರಗತಿಯತ್ತ ಸಾಗಿದೆ ಎಂದು ಎಂಪಿಐ, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ), ಆಕ್ಸ್ಫರ್ಡ್ ವಿವಿಯ ಆಕ್ಸ್ಫರ್ಡ್ ಪವರ್ಟಿ ಆ್ಯಂಡ್ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಎಚ್ಐ) ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.