ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಅಭಿವೃದ್ಧಿಗಾಗಿ ಭಾರತ ಕಳೆದ ವರ್ಷ ಘೋಷಿಸಿದ್ದ 100 ಮಿಲಿಯನ್ ಸಾಲದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಲಾಗಿದೆ. ಶ್ರೀಲಂಕಾದಲ್ಲಿ ಸೌರ ವಿದ್ಯುತ್ ಕ್ಷೇತ್ರದ ವಿವಿಧ ಯೋಜನೆಗಳಿಗಾಗಿ ಭಾರತ 100 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಿತ್ತು. ಈ ಸಾಲದಿಂದಾಗಿ ಶ್ರೀಲಂಕಾ ತನ್ನ ಶೇ.70 ರಷ್ಟು ವಿದ್ಯುತ್ ಅವಶ್ಯಕತೆಯನ್ನ ಈಡೇರಿಸಿಕೊಳ್ಳಲಿದೆ.
ಈ ಕುರಿತು ಶ್ರೀಲಂಕಾ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ನೇತೃತ್ವದಲ್ಲಿ ಭಾರತ ಹೈಕಮಿಷನ್ನ ಅಧಿಕಾರಿ ಗೋಪಾಲ್ ಬಾಗ್ಲೇ ಹಾಗೂ ಲಂಕಾದ ಹಣಕಾಸು ಕಾರ್ಯದರ್ಶಿ ಎಸ್ಆರ್ ಅಟ್ಟಿಗಲ್ಲೆ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಗಿದೆ.
ಈ ಕುರಿತು ಟ್ವೀಟ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಲಂಕಾದ ಭಾರತೀಯ ಹೈಕಮಿಷನ್, ಇದು ಭಾರತ ಮತ್ತು ಲಂಕಾದ ನಡುವಿನ ಬಹುಮುಖಿ ಸಹಭಾಗಿತ್ವದ ಹೊಸ ಅಧ್ಯಾಯ. ಸೌರಶಕ್ತಿ ಯೋಜನೆಗಾಗಿ 100 ಮಿಲಿಯನ್ ಯುಎಸ್ ಡಾಲರ್ ಸಾಲ ಸೌಲಭ್ಯ ನೀಡುವ ಒಪ್ಪಂದಕ್ಕೆ ಸಹಿ ಮಾಡಲಾಯಿತು ಎಂದು ಮಾಹಿತಿ ನೀಡಿದೆ.
2018ರಲ್ಲಿ ನಡೆದ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಸಮ್ಮೇಳನದಲ್ಲಿ ಶ್ರೀಲಂಕಾ ಸೌರ ವಿದ್ಯುತ್ ಯೋಜನೆಗೆ ಸಹಾಯ ಹಸ್ತ ಚಾಚುವುದಾಗಿ ಭಾರತ ಘೋಷಿಸಿತ್ತು. ಬಳಿಕ 100 ಮಿಲಿಯನ್ ಯುಎಸ್ ಡಾಲರ್ ಸಾಲ ನೀಡಲು ಮುಂದಾಗಿತ್ತು. 2030ರ ವೇಳೆಗೆ ದೇಶದ ಶೆ.70ರಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲದಿಂದ ಪಡೆಯುವ ಅಧ್ಯಕ್ಷರ ಯೋಜನೆಗೆ ಮೊದಲನೆಯದಾಗಿ ಸಹಾಯ ಮಾಡಲು ಮುಂದೆ ಬಂದ ರಾಷ್ಟ್ರ ಭಾರತವಾಗಿದೆ ಎಂದು ಶ್ರೀಲಂಕಾ ಹೂಡಿಕೆ ಸಮ್ಮೇಳನದಲ್ಲಿ ಅಧ್ಯಕ್ಷ ರಾಜಪಕ್ಸೆ ಪುನರುಚ್ಚರಿಸಿದ್ದರು.
ಕಳೆದ 7 ವರ್ಷಗಳಲ್ಲಿ ಭಾರತದ ಸೌರ ವಿದ್ಯುತ್ ಉತ್ಪಾದನೆಯು ಮಾರ್ಚ್ 2014ರಲ್ಲಿ ಸುಮಾರು 2.6GW ಯಿಂದ 2021ರಲ್ಲಿ 34.6 GW ತಲುಪಿದೆ. ಭಾರತದ ರಾಷ್ಟ್ರೀಯ ಸೌರ ಮಿಷನ್ ಇದನ್ನು 100 GW ಮತ್ತು ಅದಕ್ಕೂ ಮೀರಿ ಹೆಚ್ಚಿಸುವ ಗುರಿ ಹೊಂದಿದೆ.