ನವದೆಹಲಿ: ಆರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ಸಾಲ ಮರುಪಾವತಿ ಅವಧಿ ವಿಸ್ತರಿಸುವ ಮತ್ತು ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ನಡೆಸಿತು.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿ ಇಟ್ಟುಕೊಂಡು 2 ಕೋಟಿ ರೂ. ತನಕ ಎಂಟು ನಿರ್ದಿಷ್ಟ ವರ್ಗದ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವ ನಿರ್ಧಾರವನ್ನು ಕೂಡಲೇ ಜಾರಿಗೆ ತರುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಗಜೇಂದ್ರ ಶರ್ಮಾ ಅವರು ಈ ಅರ್ಜಿ ಸಲ್ಲಿಸಿದ್ದು, ಇದರಲ್ಲಿ ಸಾಲದ ನಿಷೇಧದ ಅವಧಿಯಲ್ಲಿ ಬಡ್ಡಿಯಿಂದ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಶರ್ಮಾ ತಮ್ಮ ಮನವಿಯಲ್ಲಿ ಐಸಿಐಸಿಐ ಬ್ಯಾಂಕ್ನಿಂದ 37,48,000 ರೂ. ಗೃಹ ಸಾಲ ತೆಗೆದುಕೊಂಡಿದ್ದೇನೆ. ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ನಿಂದಾಗಿ ಕೆಲಸ ಮುಂದುವರಿಸಲು ಮತ್ತು ಜೀವನೋಪಾಯ ಗಳಿಕೆಯ ಯಾವುದೇ ಮಾರ್ಗವಿಲ್ಲ ಎಂದಿದ್ದರು. ಆದರೆ, ನ್ಯಾಯಾಲಯ ಅವರ ಮನವಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾಯಮೂರ್ತಿ ಆರ್ ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರಿದ್ದ ನ್ಯಾಯಪೀಠ, "ಕೋವಿಡ್ 19 ಸಾಂಕ್ರಾಮಿಕವು ಜನರ ಆರೋಗ್ಯಕ್ಕೆ ಗಂಭೀರ ಬೆದರಿಕೆಯೊಡ್ಡಿದೆ. ಇದು ಮಾತ್ರವಲ್ಲದೆ ದೇಶದ ಆರ್ಥಿಕ ಬೆಳವಣಿಗೆ ಹಾಗೂ ಮತ್ತು ಇಡೀ ವಿಶ್ವದ ಮೇಲೆ ತನ್ನ ಕರಿ ನೆರಳು ಚಾಚಿದೆ ಎಂದು ಹೇಳಿತು.
ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರಚಲಾಯಿಸಲು ಕೇಂದ್ರ ಸರ್ಕಾರ ವಿಧಿಸಿರುವ ಲಾಕ್‌ಡೌನ್ ಕಾರಣದಿಂದಾಗಿ, ಖಾಸಗಿ ವಲಯ ಸೇರಿದಂತೆ ಹೆಚ್ಚಿನ ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಲವು ತಿಂಗಳುವರೆಗೆ ಬಹುತೇಕ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಅನುಮತಿಸಲಿಲ್ಲ. ಕೆಲವು ಕೈಗಾರಿಕೆಗಳಿಗೆ ಮಾತ್ರ ಚಟುವಟಿಕೆ ನಡೆಸಲು ವಿನಾಯಿತಿ ನೀಡಲಾಯಿತು. ವಾಸ್ತವಿಕ ಪರಿಸ್ಥಿತಿಯಲ್ಲಿ ಇದು ಅಗತ್ಯ ಎಂಬುದು ಕಂಡುಬಂದಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಈ ಅರ್ಜಿ ಜೊತೆಗೆ ವಿವಿಧ ವಲಯಗಳು ಸಲ್ಲಿಸಿದ ಇತರ ಮನವಿಗಳ ವಿಚಾರಣೆ ಇನ್ನೂ ಬಾಕಿ ಉಳಿದಿವೆ. ಹೀಗಾಗಿ, ನ್ಯಾಯಾಲಯವು ತನ್ನ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.